ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸೌಂದರ್ಯೀಕರಣಕ್ಕೆ ₹ 10 ಕೋಟಿ

ರಸ್ತೆ ವಿಭಜಕಕ್ಕೆ ಗ್ರಿಲ್‌ ಅಳವಡಿಕೆ ಕಾರ್ಯ ಆರಂಭ
Last Updated 1 ಮಾರ್ಚ್ 2018, 9:37 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರವು ನಗರೋತ್ಥಾನ ಮೂರನೇ ಹಂತದ ಯೋಜನೆಯಲ್ಲಿ ಬೀದರ್‌ ನಗರದ ರಸ್ತೆ ಅಭಿವೃದ್ಧಿಗೆ ₹ 10 ಕೋಟಿ ಬಿಡುಗಡೆ ಮಾಡಿದೆ. ನಗರದ ಶಹಾಪುರ ಗೇಟ್‌ದಿಂದ ನೌಬಾದ್‌ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಿದ್ಧತೆ ನಡೆದಿದೆ.

ಮೂರು ದಿನಗಳ ಹಿಂದೆಯೇ ₹ 10 ಕೋಟಿ ಹಣ ಬಂದಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಿಸ್ತೃತ ಯೋಜನಾ ವರದಿಯನ್ನು ಪೌರಾಡಾಳಿತ ಇಲಾಖೆಗೆ ಸಲ್ಲಿಸಿದ್ದಾರೆ. ಯೋಜನೆಯಲ್ಲಿ ರಸ್ತೆ ಸುಧಾರಣೆ, ರಸ್ತೆ ಬದಿಗೆ ಗಟಾರಗಳ ನಿರ್ಮಾಣ ಹಾಗೂ ಫುಟ್‌ಪಾತ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಶಹಾಪುರ ಗೇಟ್‌ನಿಂದ ಲಾಡಗೇರಿ ಸಮೀಪ ರೈಲ್ವೆ ಮೇಲ್ಸೇತುವೆ ವರೆಗೆ ಮತ್ತು ಮಡಿವಾಳ ವೃತ್ತದಿಂದ ನೌಬಾದ್‌ ವರೆಗೆ ಈಗಾಗಲೇ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಹೈದರಾಬಾದ್ ರಸ್ತೆಯಲ್ಲಿ ಡಾಂಬರೀಕರಣ ಸಹ ಮಾಡಲಾಗಿದೆ. ರಸ್ತೆ ಬದಿಗೆ ಬಿಳಿಪಟ್ಟಿ ಬಳಿದು ಸುಗಮ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಯು ಬಸವೇಶ್ವರ ವೃತ್ತದಿಂದ ಲಾಡಗೇರಿ ವರೆಗೆ ರಸ್ತೆ ದುರಸ್ತಿಗೆ ತಯಾರಿ ನಡೆಸಿದೆ.

‘ನಗರ ಸೌಂದರ್ಯೀಕರಣದ ಉದ್ದೇಶದಿಂದ ರಸ್ತೆ ಎರಡು ಬದಿಗೂ ಫುಟ್‌ಪಾತ್‌ ನಿರ್ಮಿಸಲಾಗುವುದು. ಫುಟ್‌ಪಾತ್‌ಗೆ ಬಣ್ಣದ ಬ್ಲಾಕ್‌ ಟೈಲ್ಸ್‌ ಬಳಸಲಾಗುವುದು. ರಸ್ತೆ ಬದಿಗೆ ಅಲಂಕಾರಿಕ ವಿದ್ಯುತ್‌ ದೀಪಗಳನ್ನು ಅಳವಡಿಸುವ ಉದ್ದೇಶ ಇದೆ’ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಹೇಳುತ್ತಾರೆ.

ಗ್ರಿಲ್‌ ಅಳವಡಿಕೆ: ಜಿಲ್ಲಾ ಆಡಳಿತವು ಐತಿಹಾಸಿಕ ನಗರಕ್ಕೆ ಇನ್ನಷ್ಟು ಮೆರುಗು ನೀಡಲು ನಗರ ಸೌಂದರ್ಯೀಕರಣ ಕಾಮಗಾರಿಯನ್ನು ಆರಂಭಿಸಿದೆ.
ಮೊದಲ ಹಂತವಾಗಿ ಮಡಿವಾಳ ವೃತ್ತದಿಂದ ಗುರುನಾನಕ ಗೇಟ್‌ ವರೆಗೆ ಗ್ರಿಲ್‌ ಅಳವಡಿಸುವ ಕಾರ್ಯ ಶುರು ಆಗಿದೆ. ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಉದ್ದಕ್ಕೂ ಗ್ರಿಲ್‌ ಅಳವಡಿಸಲು ಯೋಜನೆ ರೂಪಿಸಿದೆ.

‘ಪ್ರಸ್ತುತ ಲೋಕೋಪಯೋಗಿ ಇಲಾಖೆಯ ₹ 20 ಲಕ್ಷ ಹೆಚ್ಚುವರಿ ಅನುದಾನದಲ್ಲಿ ರಸ್ತೆ ಮಧ್ಯೆ ಗ್ರಿಲ್‌ಗಳನ್ನು ಅಳವಡಿಸಲಾಗುತ್ತಿದೆ. ಪಾದಚಾರಿಗಳು ರಸ್ತೆ ನಡುವಿನಿಂದ ಆಚೆ, ಈಚೆಗೆ ದಾಟುವುದನ್ನು ತಡೆಯಲು ಗ್ರಿಲ್‌ ಅಳವಡಿಸಲಾಗುತ್ತಿದೆ. ಇದರಿಂದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ’ ಎನ್ನುತ್ತಾರೆ ರಹೀಂ ಖಾನ್‌.
‘ರಸ್ತೆ ವಿಭಜಕದ ಮಧ್ಯೆ ಹೂವಿನ ಸಸಿಗಳನ್ನು ನೆಟ್ಟು ಬೆಳೆಸಬಹುದು. ಸಸಿಗಳಿಗೆ ಜಾನುವಾರುಗಳಿಂದ ರಕ್ಷಣೆ ಒದಗಿಸಬಹುದು. ಇದರಿಂದ ಹಸರೀಕರಣಕ್ಕೂ ಅನುಕೂಲವಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿಕಾಂತ ಮಳ್ಳಿ ಹೇಳುತ್ತಾರೆ.
**
ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುವ ಮೊದಲು ರಸ್ತೆ ಸೌಂದರ್ಯೀಕರಣ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
– ರಹೀಂ ಖಾನ್‌, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT