ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇರದಾಳ ಪುರಸಭೆ: ಎರಡನೇ ಅವಧಿಗೂ ಮಹಿಳೆಯರಿಗೆ ಗದ್ದುಗೆ

ಅಮರ ಇಂಗಳೆ
Published 10 ಆಗಸ್ಟ್ 2024, 5:24 IST
Last Updated 10 ಆಗಸ್ಟ್ 2024, 5:24 IST
ಅಕ್ಷರ ಗಾತ್ರ

ತೇರದಾಳ: ಒಂದು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಎರಡನೇ ಅವಧಿಗೆ ಕೊನೆಗೂ ಮೀಸಲಾತಿ ಪ್ರಕಟಗೊಂಡಿದೆ. ತೇರದಾಳ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪ.ಜಾ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆಗೆ ಮೀಸಲುಗೊಂಡಿದೆ. ಇದರಿಂದ ಎರಡನೇ ಅವಧಿಯೂ ತೇರದಾಳ ಪುರಸಭೆ ಮಹಿಳೆಯರ ಪಾಲಾಗಲಿದೆ.

ಮೊದಲನೇ ಅವಧಿಗೆ ಅಧ್ಯಕ್ಷ ಸ್ಥಾನ ‘2ಎ’ ಮಹಿಳೆ ಹಾಗೂ ಉಪಾಧ್ಯಕ್ಷ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿತ್ತು. ಎರಡನೇ ಅವಧಿಗೂ ಮಹಿಳೆಯರಿಗಡ ಮೀಸಲಾತಿ ಇರುವುದರಿಂದ ಪುರುಷ ಸದಸ್ಯರಿಗೆ ನಿರಾಸೆಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಮೊದಲ ಅವಧಿ ಮುಗಿದು ಒಂದು ವರ್ಷಕ್ಕೂ ಅಧಿಕವಾಗಿದೆ.

23 ಸದಸ್ಯರ ಸಂಖ್ಯಾ ಬಲ ಹೊಂದಿರುವ ತೇರದಾಳ ಪುರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 10 ಜನ ಸದಸ್ಯರಿದ್ದು, ಮೂವರು ಪಕ್ಷೇತರ ಸದಸ್ಯರಿದ್ದಾರೆ. ಆದರೆ ಚುನಾಯಿತಗೊಂಡಾಗಿನಿಂದ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. 10 ಬಿಜೆಪಿ, ಮೂವರು ಬಿಜೆಪಿ ಬೆಂಬಲಿತ, ಶಾಸಕ, ಸಂಸದ ಮತ ಸೇರಿ ಒಟ್ಟು 15 ಮತ ಆಗುತ್ತದೆ. ಮ್ಯಾಜಿಕ್ ಸಂಖ್ಯೆ 12 ಇರುವುದರಿಂದ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತಗೊಂಡಿದೆ.

ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಇದ್ದು, ಬಿಜೆಪಿಯಲ್ಲಿ ಕಮಲವ್ವ ವಡ್ಡರ ಹಾಗೂ ಪುಷ್ಪಲತಾ ಬಂಕಾಪುರ ಇಬ್ಬರು ಆಕಾಂಕ್ಷಿಗಳಿದ್ದಾರೆ. ಪುಷ್ಪಲತಾ ಎಂಬಿಎ ಪದವೀಧರೆ ಆಗಿದ್ದರೆ, ಕಮಲವ್ವ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಪುಷ್ಪಲತಾ ಬಂಕಾಪುರ ಪತಿ ವಿನಾಯಕ ಬಂಕಾಪುರ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ ಸದಸ್ಯೆ ಆಗಿದ್ದಾರೆ. ಕಮಲವ್ವ ವಡ್ಡರ ಕೂಡ ಪ್ರಭಾವಿ ಆಗಿದ್ದು, ಇಬ್ಬರ ನಡುವೆ ಆಂತರಿಕವಾಗಿ ಪೈಪೋಟಿ ಆರಂಭವಾಗಿದೆ.

ಇನ್ನೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲುಗೊಂಡಿದ್ದು, ರೂಪಾ ಶಂಕರ ಕುಂಬಾರ ಹಾಗೂ ಸಂಗೀತಾ ಕೇದಾರಿ ಪಾಟೀಲ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಸಂಗೀತಾ ಕೇದಾರಿ ಪಾಟೀಲ ಮಾಳಿ ಸಮಾಜದವರಾಗಿದ್ದು, ಮೊದಲ ಅವಧಿಯಲ್ಲಿ ಮಾಳಿ ಸಮಾಜದ ಅನ್ನಪೂರ್ಣ ಸದಾಶಿವ ಹೊಸಮನಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ರೂಪಾ ಕುಂಬಾರ, ಕುಂಬಾರ ಸಮಾಜದವರಾದ್ದು, ಪಕ್ಷದವರು ಈಗ ಮತ್ತೆ ಮಾಳಿ ಸಮಾಜಕ್ಕೆ ಮಣೆ ಹಾಕುತ್ತಾರೋ ಅಥವಾ ಕುಂಬಾರ ಸಮಾಜಕ್ಕೆ ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತಾರೋ ಕಾದು ನೋಡಬೇಕಿದೆ.

10 ಜನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ಸಂಖ್ಯೆಯಿಲ್ಲದ್ದರಿಂದ ಮೌನವಾಗಿದೆ. ಅಲ್ಲಿ ಇಬ್ಬರು ಎಸ್ಸಿ ಮಹಿಳಾ ಸದಸ್ಯರಿದ್ದಾರೆ. ಇವರಲ್ಲಿ ಶಿಲ್ಪಾ ಗೌತಮ ರೋಡಕರ ಪ್ರಬಲರಾಗಿದ್ದಾರೆ. ಆದರೆ ಸಂಖ್ಯಾಬಲವಿಲ್ಲದ್ದರಿಂದ ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT