ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಪ್ರತಿಷ್ಠಾಪನೆಗೆ ಬಾಗಲಕೋಟೆ ಜಿಲ್ಲೆ ಸಜ್ಜು

2,943 ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ
Published : 5 ಸೆಪ್ಟೆಂಬರ್ 2024, 5:19 IST
Last Updated : 5 ಸೆಪ್ಟೆಂಬರ್ 2024, 5:19 IST
ಫಾಲೋ ಮಾಡಿ
Comments

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಒದಗಿಸಿದ್ದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಈಗ ಎಲ್ಲೆಡೆ ವಿಸ್ತರಿಸಿಕೊಂಡಿದೆ. ಮನೆಗಳಲ್ಲಷ್ಟೇ ಅಲ್ಲದೆ, ಯುವಕ ಮಂಡಲಗಳು ಗಲ್ಲಿ, ಗಲ್ಲಿಯಲ್ಲಿಯೂ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿವೆ.

ಮೂರು, ಐದು, ಏಳು, ಒಂಬತ್ತು ದಿನಗಳ ಕಾಲ ಜಿಲ್ಲೆಯಾದ್ಯಂತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಬೇಕಾದ ಮೂರ್ತಿಗಳ ತಯಾರಿಕೆ ಆರು ತಿಂಗಳ ಹಿಂದೆಯೇ ಆರಂಭಗೊಂಡಿದೆ. ಪ್ರತಿಷ್ಠಾಪನೆ ಪೆಂಡಾಲ್ ನಿರ್ಮಾಣ ಕಾರ್ಯದ ಸಿದ್ಧತೆಗಳು ಕಳೆದೊಂದು ವಾರದಿಂದ ಭರದಿಂದ ನಡೆದಿವೆ.

ಜಿಲ್ಲೆಯಲ್ಲಿಯೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಅದ್ದೂರಿಯಾಗಿಯೇ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಮೂರ್ತಿಗಳ ಪ್ರತಿಷ್ಠಾಪನೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಈಗಾಗಲೇ 2,943 ಸಾರ್ವಜನಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಮಂಡಳಿಗಳು ಅನುಮತಿ ಪಡೆದುಕೊಂಡಿವೆ. ಇನ್ನು ಎರಡು ದಿನಗಳಲ್ಲಿ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಜಲಮೂಲ ಕಲುಷಿತವಾಗದಂತೆ ವಿಸರ್ಜನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಪರಿಸರ ಪರ ಹಬ್ಬವಾಗಿ ಆಚರಿಸಿ.
ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ

ಕಳೆದ ವರ್ಷ 2,709 ಕಡೆಗೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿತ್ತು. ಬಾಗಲಕೋಟೆ ನಗರದಲ್ಲಿ ಶಹರ ಗಜಾನನ ಉತ್ಸವ ಮಂಡಳಿ ವತಿಯಿಂದ 73 ವರ್ಷಗಳಿಂದ ನಿರಂತರವಾಗಿ ಗಣೇಶ ಮೂರ್ತಿ ಮಾಡುತ್ತ ಬರಲಾಗಿದೆ. ಈಗಾಗಲೇ ಗಣೇಶ ಮಂಡಳಿಗಳು ಗಣೇಶ ಮೂರ್ತಿಗಳ ಬುಕಿಂಗ್‌ ಮಾಡಿವೆ. ತಯಾರಕರು ಅವುಗಳಿಗೆ ಕೊನೆಯ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪೆಂಡಾಲ್‌ ನಿರ್ಮಾಣ ಕಾರ್ಯವೂ ಜೋರಾಗಿ ನಡೆದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳನ್ನು ಒಂದು ದಿನದಿಂದ 13 ದಿನಗಳವರೆಗೂ ಪೂಜಿಸಿ ನಂತರ  ವಿಸರ್ಜನೆ ಮಾಡಲಾಗುತ್ತಿದೆ.

ಮೊದಲ ದಿನ 164 ಕಡೆ, ಐದನೇ ದಿನಕ್ಕೆ 1,629 ಕಡೆಗಳಲ್ಲಿ, ಏಳನೇ ದಿನಕ್ಕೆ 619, ಒಂಬತ್ತನೇ ದಿನಕ್ಕೆ 196, 11ನೇ ದಿನಕ್ಕೆ 121 ಹಾಗೂ 13ನೇ ದಿನಕ್ಕೆ 11 ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿಯೇ ಕೆಲವು ಸ್ಥಳಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅದರ ಆಧಾರದ ಮೇಲೆ ಅಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. 1,600 ಪೊಲೀಸ್ ಸಿಬ್ಬಂದಿ ಜೊತೆಗೆ 800 ಹೋಮ್‍ ಗಾರ್ಡ್ಸ್, 12 ಡಿಆರ್, 8 ಕೆಎಸ್‍ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿಯೂ ಹೆಚ್ಚಿನ ಭದ್ರತೆ ನೀಡಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಲ್ಲಲ್ಲಿ ಅಳವಡಿಸಲಾಗಿದ್ದು, ಅವುಗಳ ಮೂಲಕ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT