ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕವಿ’

ಇಳಕಲ್‍: ಅಗಲಿದ ಸಾಧಕರಿಗೆ ಸಾಹಿತ್ಯ ಪರಿಷತ್ ನುಡಿನಮನ
Last Updated 19 ಫೆಬ್ರುವರಿ 2022, 2:35 IST
ಅಕ್ಷರ ಗಾತ್ರ

ಇಳಕಲ್‍ : ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ನೇಹರಂಗದಿಂದ ಈಚೆಗೆ ಅಗಲಿದ ಕವಿ ಚೆನ್ನವೀರ ಕಣವಿ, ಪ್ರವಚನಕಾರರಾದ ಇಬ್ರಾಹಿಂ ಸುತಾರ ಹಾಗೂ ಡಾ. ಈಶ್ವರ ಮಂಟೂರ, ಗಾಯಕಿ ಲತಾ ಮಂಗೇಶ್ಕರ್, ಕಲಾವಿದೆ ಭಾರ್ಗವಿ ನಾರಾಯಣ ಹಾಗೂ ರಂಗಕರ್ಮಿ ಜಗದೀಶ ಕೊಪ್ಪರದ ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ. ವಿಶ್ವನಾಥ ವಂಶಾಕೃತಮಠ ಮಾತನಾಡಿ, ಸಮನ್ವಯ ಕವಿ, ಸಾನೆಟ್‍ಗಳ ರಾಜ ಎಂದೇ ಹೆಸರಾಗಿದ್ದ ಚೆನ್ನವೀರ ಕಣವಿಯವರು ಕನ್ನಡ ಸಾಹಿತ್ಯದಲ್ಲಿ ಹೊಂಬೆಳಕು ಚೆಲ್ಲಿ, ಕಾವ್ಯರಸಿಕರ ಮನಸೂರೆಗೊಂಡಿದ್ದರು. ಒಳಿತು, ಒಳ್ಳೆತನದ ಮೂರ್ತರೂಪವಾಗಿದ್ದ ಕಣವಿಯವರು ತಮ್ಮ ಕಾವ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಇಳಕಲ್‍ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ ಮಾತನಾಡಿ, ಮನುಷ್ಯರ ನಡುವಿನ ಜಾತಿ, ಧರ್ಮದ ಗೋಡೆಯನ್ನು ಒಡೆದು ಭಾವೈಕ್ಯತೆ ಸಮಾಜ ಕಟ್ಟಲು ಹಗಲಿರುಳು ಶ್ರಮಿಸಿದ ಸುತಾರ ಅವರ ವ್ಯಕ್ತಿತ್ವ, ಸಂದೇ ಎಲ್ಲರನ್ನು ಆವರಿಸಿದಾಗ ಸುಂದರ ಸಮಾಜ ನಿರ್ಮಾಣವಾಗುವುದು. ಇಂದಿನ ದುಷ್ಕಾಲದಲ್ಲಿ ಇನ್ನಷ್ಟು ಅವರ ಮಾರ್ಗದರ್ಶನ ಅಗತ್ಯವಿತ್ತು ಎಂದು ಹೇಳಿದರು.

ಲತಾ ಮಂಗೇಶ್ಕರ್ ಅವರು ತಮ್ಮ ಅಪ್ರತಿಮ ಸಂಗೀತ ಸಾಧನೆಯ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದರು ಎಂದು ಗಾಯಕ ಗೋಪಿಕೃಷ್ಣ ಕಠಾರೆ ಸ್ಮರಿಸಿದರು. ಪ್ರವಚನಕಾರ ಡಾ.ಈಶ್ವರ ಮಂಟೂರ ಅವರು ನಾಡಿನಾದ್ಯಂತ ಬಸವದರ್ಶನ ಪ್ರವಚನಗಳ ಮೂಲಕ ಬಸವತತ್ವ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಸ್ಕಲಿತ ಮಾತು, ಮಾಧುರ್ಯಪೂರ್ಣ ಹಾಡನ್ನು ಸದಾ ನೆನಪಲ್ಲಿ ಉಳಿಯುತ್ತದೆ' ಎಂದು ಹೇಳಿದರು.

ಕಸಾಪ ಕೋಶಾಧ್ಯಕ್ಷ ರಾಮನಗೌಡ ಸಂದಿಮನಿ ಮಾತನಾಡಿ, ಸಾಧಕರ ಅಗಲಿಕೆಯಿಂದ ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಹೇಳಿದರು. ಹಿರಿಯ ನಟಿ ಭಾರ್ಗವಿ ನಾರಾಯಣ, ರಂಗಕರ್ಮಿ ಜಗದೀಶ ಕೊಪ್ಪರದ ಅವರ ವ್ಯಕ್ತಿತ್ವ, ಸಾಧನೆಯನ್ನು ಸ್ಮರಿಸಲಾಯಿತು.

ಶಿವಾನಂದ ರುಳಿ, ಶ್ರೀದೇವಿ ಕರ್ಜಗಿ, ಸದಾಶಿವ ದೊಡ್ಡಮನಿ, ಕೆ.ಎಚ್. ಸೋಲಾಪೂರ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಾಸ್ತ್ರಿ, ಚಂದ್ರಕಾಂತ ವಂದಕುದರಿ, ಬಸವರಾಜ ಕೋಟಿ, ರಮೇಶ ಚಿತ್ರಗಾರ, ಮಲ್ಲಿಕಾರ್ಜುನ ಶಿರೂರ, ಉಮೇಶ ಶಿರೂರ, ದೇವೆಂದ್ರಪ್ಪ ದೊಡ್ಡಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT