ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ: ಕೊರೊನಾ ವೈರಸ್ ಭೀತಿಯಿಂದ ವಹಿವಾಟು ಸ್ತಬ್ಧ

Last Updated 18 ಮಾರ್ಚ್ 2020, 13:22 IST
ಅಕ್ಷರ ಗಾತ್ರ

ಹುನಗುಂದ:ಪಟ್ಟಣದಲ್ಲಿ ಸದಾ ಜನಜಗುಳಿಯಿಂದ ಕೂಡಿರುತ್ತಿದ್ದ ಪ್ರಮುಖ ಸ್ಥಳಗಳು ಈಗಕೊರೊನಾ ವೈರಸ್ ಹರಡುವಿಕೆ ಭೀತಿಯಿಂದಾಗಿ ಜನರಿಲ್ಲದೆ ಬಿಕೊ ಎನ್ನುತ್ತಿವೆ. ಇದರಿಂದ ವ್ಯಾಪಾರ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ಹೊರ ರಾಜ್ಯದ ನೂರಾರು ವಾಹನಗಳ ಸಂಚರಿಸುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ವಾಹನಗಳ ದಟ್ಟಣೆ ಕಡಿಮೆಯಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಹೋಟೆಲ್, ಡಾಬಾ, ಪಾನ್‌ಶಾಪ್‌ಗಳತ್ತ ಬರುವ ಜನರು ವಿರಳವಾಗಿದೆ. ಇದರ ನೇರ ಪರಿಣಾಮ ಹೋಟೆಲ್ ಮತ್ತು ಡಾಬಾ ನಡೆಸುತ್ತಿರುವವರ ಮೇಲೆ ಬೀರಿದೆ.

ಕಳೆದ 2-3 ದಿನಗಳಿಂದ ರಾಜ್ಯದ ಕೆಲವು ಕಡೆ ಹಕ್ಕಿ ಜ್ವರದ ಭಯದಿಂದ ಕೆಲವು ಕಡೆ ಕೋಳಿಗಳ ಮಾರಣ ಹೋಮ ನಡೆಯುತ್ತಿರುವ ಪರಿಣಾಮ ಇಲ್ಲಿನ ಚಿಕನ್ ಶಾಪ್ ಗಳ ಹತ್ತಿರ ಜನರು ಸುಳಿಯುತ್ತಿಲ್ಲ.

ಬಸ್ ನಿಲ್ದಾಣದಲ್ಲಿಯೂ ಪ್ರತಿ ನಿತ್ಯ ಸಾವಿರಾರು ತಮ್ಮ ಕೆಲಸ ಕಾರ್ಯಗಳಿಗಾಗಿ ಪಟ್ಟಣದತ್ತ ಹೆಜ್ಜೆ ಹಾಕುತ್ತಿದ್ದರೂ ಆದರೆ ಕಳೆದ 3-4 ದಿನಗಳಿಂದ ಬಸ್ ನಿಲ್ದಾ ಣದಲ್ಲಿ ಜನಸಂಖ್ಯೆ ವಿರಳವಾಗಿದೆ. ವಾಹನಗಳು ಪ್ರಯಾಣಿಕರಲ್ಲದೇ ಖಾಲಿ ಸಂಚರಿಸುತ್ತಿವೆ. ಆದಾಯ ಕೂಡ ಕಡಿಮೆಯಾಗುತ್ತಿದೆ ಎಂದು ನಿರ್ವಾಹಕರೊಬ್ಬರು ತಿಳಿಸಿದರು.

ಸದಾ ಜನರಿಂದ ಕೂಡಿರುತ್ತಿದ್ದ ತಹಶೀಲ್ದಾರ್ ಕಚೇರಿ, ಸರ್ಕಾರಿ ಆಸ್ಪತ್ರೆ, ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿಗಳು ಜನರಿಲ್ಲದೇ ಭಣಗುಡುತ್ತಿವೆ. ಇದರಿಂದ ವ್ಯಾಪಾರ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದೆ.

ಪಟ್ಟಣದಲ್ಲಿ ಚಿಕನ್ ಶಾಪ್ ನಡೆಸುತ್ತಿರುವ ಸಂತೋಷ ಕಲಾಲ ಮಾತನಾಡಿ, ಒಂದು ಕಡೆ ಕೊರೊನೊ, ಇನ್ನೊಂದು ಕಡೆ ಹಕ್ಕಿ ಜ್ವರದ ಭೀತಿಯಿಂದ ವ್ಯಾಪಾರ ಸಂಪೂರ್ಣ ಕುಸಿದಿದೆ. ಈ ಮೊದಲು ಪ್ರತಿ ದಿನ 40ರಿಂದ 50 ಕೆ.ಜಿವರಗೆ ಚಿಕನ್ ಮಾರಾಟವಾಗುತ್ತಿತ್ತು. ಈಗ 5 ಕೆ.ಜಿಗೆ ಇಳಿದಿದೆ ಎಂದರು.

ಕೆ ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಉಪಹಾರ ಗೃಹದ ಮಾಲೀಕ ಸುಭಾಷ ಶೆಟ್ಟಿ ಮಾತನಾಡಿ, ಈ ಮೊದಲು ಹೋಟೆಲ್ ಸದಾ ಜನರಿಂದ ತುಂಬಿರುತ್ತಿತ್ತು.ನಿತ್ಯ ₹10 ರಿಂದ12 ಸಾವಿರದವರೆಗೆ ಗಳಿಕೆ ಆಗುತ್ತಿತ್ತು. ಈಗ ಅದು ₹ 4ರಿಂದ 5 ಸಾವಿರಕ್ಕೆ ಇಳಿದಿದೆ ಎಂದರು.

ಕಾಯಿಪಲ್ಲೆ ಅಂಗಡಿಯ ಮುನ್ನಾ ಬಾಗವಾನ ಮಾತನಾಡಿ, ಕೊರೊನಾ ಭೀತಿಯಿಂದ ಕಳೆದೊಂದು ವಾರದಿಂದ ಕಾಯಿಪಲ್ಲೆ ಖರೀದಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಾರಾಟಗಾರರು ಮತ್ತು ಬೆಳೆಗಾರರಿಗೆ ತೊಂದರೆ ಆಗುತ್ತಿದೆ ಎಂದು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT