
ಪ್ರಚಾರಕ್ಕೆ ಸ್ಪಂದನೆ ಹೇಗಿದೆ?
ಪ್ರಚಾರ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಂದೆ ಎಚ್.ವೈ. ಮೇಟಿ ಅವರ ಮಗ ಎಂದು ಜನರು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಕಾರ್ಯಕರ್ತರು, ನಾಯಕರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಂದು ಹೋದ ಮೇಲೆ ಉತ್ಸಾಹ ಹೆಚ್ಚಾಗಿದೆ. ಜಿಲ್ಲೆಯ ಎಲ್ಲ ನಾಯಕರೂ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಕ್ತಿ ತುಂಬಿದ್ದಾರೆ.
ನಿಮ್ಮ ತಂದೆ ಎಚ್.ವೈ. ಮೇಟಿ ಅವರು ಶಾಸಕರಾಗಿದ್ದಾಗ ಮಾಡಿದ ಕಾರ್ಯಗಳು?
ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಬಹಳ ಪ್ರಯತ್ನ ಪಟ್ಟಿದ್ದರು. ಶಂಕುಸ್ಥಾಪನೆ ಮಾಡಿರುವುದರಿಂದ ಅವರ ಕನಸು ಈಗ ನನಸಾಗಿದೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಹಾಳಾದ ಹಲವು ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ತಂದು ಡಾಂಬರೀಕರಣ ಮಾಡಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಕಾಲೊನಿಯಗಳ ಅಭಿವೃದ್ಧಿ ಮಾಡಿದ್ದಾರೆ. ₹1,200 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿ ಮಾಡಿಸಿದ್ದಾರೆ.
ಕ್ಷೇತ್ರದ ಜನತೆಗೆ ಭರವಸೆಗಳೇನು?
ಮುಳುಗಡೆಯ ನಂತರ ಬಾಗಲಕೋಟೆಯ ವ್ಯಾಪಾರ ಕ್ಷೇತ್ರ ಕುಸಿದು ಹೋಗಿದೆ. ಅದಕ್ಕೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿ ಸಮಗ್ರ ಮಾರುಕಟ್ಟೆ ಆರಂಭಿಸುವ ಯೋಚನೆ ಮೇಟಿ ಅವರದಾಗಿತ್ತು. ಈಗಾಗಲೇ ಮುಖ್ಯಮಂತ್ರಿಗಳು ಮಾರುಕಟ್ಟೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಅದನ್ನು ಪೂರ್ಣಗೊಳಿಸುವ ಮೂಲಕ ವ್ಯಾಪಾರ ಅಭಿವೃದ್ಧಿಗೆ ಮುಂದಾಗುತ್ತೇನೆ.
ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಮುಂದಾಗುತ್ತೇನೆ. ಪ್ರವಾಸೋದ್ಯಮ ಇಲಾಖೆ ನೆರವಿನೊಂದಿಗೆ ಮಲ್ಲಯ್ಯನ ಗುಡ್ಡದ ಅಭಿವೃದ್ಧಿ. ಸರ್ಕಾರದ ಎಲ್ಲ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಬಾಗಲಕೋಟೆಯಲ್ಲಿನ ನಡುಗಡ್ಡೆ ಮುಳುಗಡೆಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ತಂದೆಯವರು ಚಾಲನೆ ನೀಡಿದ್ದರು. ಅದನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ.
ನಿಮಗೆ ಯಾಕೆ ಮತ ಹಾಕಬೇಕು?
ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆಗೆ ಮುನ್ನ ನೀಡಿದ್ದ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಬಡವರಿಗೆ, ಮಹಿಳೆಯರಿಗೆ ಸ್ವಾಭಿಮಾನ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ತಂದೆಯವರಾದ ಎಚ್.ವೈ. ಮೇಟಿ ಅವರ ಕಾಲದಲ್ಲಿ ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಂದಷ್ಟು ಕನಸುಗಳನ್ನು ಕಂಡಿದ್ದೇನೆ. ಅವುಗಳನ್ನು ನನಸಾಗಿಸಲು ಕ್ಷೇತ್ರದ ಜನರು ಅವಕಾಶ ನೀಡುತ್ತಾರೆ ಎಂಬ ಭರವಸೆ ನನಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.