ಭಾನುವಾರ, ಜನವರಿ 26, 2020
29 °C
ಜಿಲ್ಲಾ ಕುರುಬರ ‍ಸಂಘದ ಚುನಾವಣೆ: ಬಾಯಕ್ಕ, ಸಿದ್ದಾಪುರ, ಅಪ್ಪನ್ನವರ ಆಯ್ಕೆ

ಶ್ರೀಶೈಲ ದಳವಾಯಿ ಬಣಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಭೂಸೇನಾ ನಿಗಮದ ಮಾಜಿ ಅಧ್ಯಕ್ಷರೂ ಆದ ಜಮಖಂಡಿಯ ಕಾಂಗ್ರೆಸ್ ಮುಖಂಡ ಶ್ರೀಶೈಲ ದಳವಾಯಿ ನೇತೃತ್ವದ ಬಣ ಭರ್ಜರಿ ಗೆಲುವು ಸಾಧಿಸಿದೆ. 

ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಶ್ರೀಶೈಲ ದಳವಾಯಿ ಬಣದಿಂದ ಉಮೇದುವಾರಿಕೆ ಸಲ್ಲಿಸಿದ್ದ, ಬಾಗಲಕೋಟೆಯ ಡಿ.ಬಿ.ಸಿದ್ದಾಪುರ ಹಾಗೂ ಬಾದಾಮಿಯ ಹನಮಂತ ಅಪ್ಪನ್ನವರ ಗೆಲುವು ಸಾಧಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಕೂಡ ಗೆಲುವಿನ ನಗೆ ಬೀರಿದ್ದಾರೆ.

ಬಾಯಕ್ಕ ಮೇಟಿಗೆ 1181 ಮತಗಳು ಬಿದ್ದರೆ ಅವರ ವಿರುದ್ಧ ಸ್ಪರ್ಧಿಸಿದ್ದ ಬಾಗಲಕೋಟೆಯ ಸುವರ್ಣಾ ನಾಗರಾಳ 301 ಮತಗಳನ್ನು ಮಾತ್ರ ಪಡೆದರು. ಹೀಗಾಗಿ ಭಾರೀ ಅಂತರದ ಗೆಲುವು ಸಾಧ್ಯವಾಗಿದೆ. ಶ್ರೀಶೈಲ‌ ದಳವಾಯಿ 1038 ಮತಗಳ ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಯೋಧ ಬಾಗಲಕೋಟೆಯ ವೈ.ಬಿ.ನಿಂಬಲಗುಂದಿ ಅವರಿಗೆ 134 ಮತಗಳು ಬಿದ್ದವು.

ಬಾದಾಮಿಯ ಹನಮಂತ ಅಪ್ಪನ್ನವರ ಅವರಿಗೆ ಇಳಕಲ್‌ನ ಸಿದ್ದಣ್ಣ ಸೂಳೆಬಾವಿ (ಘಂಟಿ) ತೀವ್ರ ಪೈಪೋಟಿ ನೀಡಿದರಾದರೂ 720 ಮತಗಳ ಪಡೆದ ಅಪ್ಪನ್ನವರ ಗೆಲುವು ಸಾಧಿಸಿದರು. ಸಿದ್ದಣ್ಣ 557 ಮತ ಪಡೆದರು.  ಜಿಲ್ಲಾ ಕುರುಬರ ಸಂಘದ ಹಿಂದಿನ ಅಧ್ಯಕ್ಷ ಡಿ.ಬಿ.ಸಿದ್ದಾಪುರ 743 ಮತ ಗಳಿಸಿದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಮುಧೋಳದ ಸಿದ್ದು ದೇವಗೋಳ 106 ಮತಗಳನ್ನು ಪಡೆದರು.

ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗುಡೂರಿನ ಚಂದಪ್ಪ‌ ಹೂಲಗೇರಿ 170, ಬಾಡಗಿಯ ಸಿದ್ದು ಕುರುಬರ 127, ಮುಧೋಳದ ಯಲ್ಲಪ್ಪ ಹೆಗಡೆ 315 ಹಾಗೂ ಬಾಗಲಕೋಟೆಯ ಹನಮಂತ ಗೊರವರ 126 ಮತಗಳನ್ನು ಪಡೆದರು.

ಸಂಘದಲ್ಲಿ 1822 ಮಂದಿ ಸದಸ್ಯರಿದ್ದು, ಅವರ ಪೈಕಿ ಚಲಾವಣೆಯಾದ ಮತಗಳಲ್ಲಿ 1550 ಅರ್ಹವಾಗಿದ್ದವು. ಮತದಾನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಪೊಲೀಸರು ಗುರುತಿನ ಚೀಟಿ ಇದ್ದವರನ್ನು ಮಾತ್ರ ಒಳಗೆ ಬಿಟ್ಟರು.  ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಕಂಡುಬಂದಿತು. ಬೆಂಗಳೂರಿಗೆ ತೆರಳಿದ್ದ ಬಾಯಕ್ಕ ಮೇಟಿ ಚುನಾವಣೆ ಪ್ರಕ್ರಿಯೆ ವೇಳೆ ಹಾಜರಿರಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು