ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧ್ಯಾ ಅನುಷ್ಠಾನ ವಿಶ್ವಕರ್ಮರ ನಿತ್ಯಕರ್ಮ

ಶಿಬಿರ ಸಮಾರೋಪದಲ್ಲಿ ಶಿವಸುಜ್ಞಾನಮೂರ್ತಿ ಮಹಾಸ್ವಾಮೀಜಿ ಅಭಿಮತ
Last Updated 28 ಜೂನ್ 2021, 14:50 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವೈಜ್ಞಾನಿಕವಾಗಿ ಸಂಧ್ಯಾ ಅನುಷ್ಠಾನ ಅತಿ ಮುಖ್ಯವಾಗಿದೆ. ವಿಶ್ವಬ್ರಾಹ್ಮಣರಿಗೆ ಇದು ನಿತ್ಯಕರ್ಮವಾಗಿದೆ’ ಎಂದು ಅರೆಮಾದನಹಳ್ಳಿಯ ಶಿವಸುಜ್ಞಾನ ವಿಶ್ವಕರ್ಮ ಪೀಠದ ಶಿವಸುಜ್ಞಾನಮೂರ್ತಿ ಮಹಾಸ್ವಾಮೀಜಿ ಹೇಳಿದರು.

ಕಮಲಾಪುರದ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರು, ಸಂಶೋಧಕರ ವೇದಿಕೆ ಹಾಗೂ ಮುರನಾಳದ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಮಳೆರಾಜೇಂದ್ರಸ್ವಾಮಿ ಮಠದಲ್ಲಿ ಭಾನುವಾರ ನಡೆದ ಏಳು ದಿನಗಳ ಸಂಧ್ಯಾ ಅನುಷ್ಠಾನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾವು ಪರಂಪರಾಗತವಾಗಿ ವೈದಿಕ ಮಾರ್ಗದಲ್ಲಿ ನಡೆದವರು. ಯಾರು ವೇದಗಳನ್ನು ಅನುಸರಿಸುತ್ತಾರೆಯೋ ಅವರೆಲ್ಲ ವೈದಿಕರು. ಆ ಪರಂಪರೆಯನ್ನು ಉಳಿಸಬೇಕು. ಹೀಗಾಗಿ ನಿತ್ಯ ಸಂಧ್ಯಾನುಷ್ಠಾನ ಅಗತ್ಯ’ ಎಂದರು.

ಚಿಕ್ಕಬಳ್ಳಾಪುರದ ನಂದಿ ಆಶ್ರಮದ ರಾಷ್ಟ್ರಸಂತ ಶಿವಾತ್ಮಾನಂದ ಸರಸ್ವತಿ ಶ್ರೀ ಮಾತನಾಡಿ, ‘ಸಮಾಜದ ಧಾರ್ಮಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಯನ್ನು ನಿಭಾಯಿಸುವುದು ಹಾಗೂ ಜನಸಾಮಾನ್ಯರಿಗೆ ಉತ್ತಮ ಸಂಸ್ಕಾರ ನೀಡುವುದು ಮಠಮಾನ್ಯಗಳ ಕೆಲಸ’ ಎಂದರು.

ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ, ‘ಪ್ರಕೃತಿಯನ್ನು ಸಂಸ್ಕರಿಸಿ ಆಕಾರ ನೀಡಲು ಅದರದೇ ಆದ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವ ರೂಪಿಸಲು ಸಂಧ್ಯಾನುಷ್ಠಾನದಂತಹ ನಿತ್ಯಕರ್ಮಾಚರಣೆ ಬೇಕು. ಈ ಸಂಸ್ಕಾರಗಳು ಆಚಾರಗಳಾಗದೇ ಮಾನವೀಯ ಮೌಲ್ಯಗಳನ್ನು ರೂಪಿಸುವಲ್ಲಿ ಸಹಕಾರಿಯಾಗಬೇಕು’ ಎಂದರು.

ನಿತ್ಯಾನಂದ ಸ್ವಾಮಿಗಳು ಹಾಗೂ ಗುರುನಾಥ ಸ್ವಾಮಿಗಳು ಆಶೀರ್ವಚನ ನೀಡಿದರು. ಜಗನ್ನಾಥ ಸ್ವಾಮಿಗಳು ಮಾತನಾಡಿ, ‘ಶ್ರೀಮಠದಲ್ಲಿ ಸಪ್ತದಿನಗಳ ಪರ್ಯಂತ ನಡೆದ ಸಂಧ್ಯಾ ಅನುಷ್ಠಾನ ಯಶಸ್ವಿಯಾಗುವ ಜೊತೆಗೆ ಉತ್ತರ ಕರ್ನಾಟಕದಲ್ಲಿ ಹೊಸ ಅಧ್ಯಾಯ ಹುಟ್ಟುಹಾಕಿದೆ. ಮಠದಲ್ಲಿ ಜ್ಞಾನದಾಸೋಹ, ಸಂಗೀತದಾಸೊಹ, ಅನ್ನದಾಸೋಹಗಳು ಪರಂಪರಾಗತ
ವಾಗಿ ಜರುಗುತ್ತಿವೆ’ ಎಂದರು.

ಶಿಬಿರದ ಪೌರೋಹಿತ್ಯ ವಹಿಸಿದ್ದ ದೇವಿ ಉಪಾಸಕ ಈರಣ್ಣ ಪತ್ತಾರ (ಬೇವೂರ) ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಶಿಬಿರದಲ್ಲಿ ಸೇವೆ ಸಲ್ಲಿಸಿದವರಿಗೂ ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ಮೌನೇಶಸ್ವಾಮಿಗಳು, ಚಿದಾನಂದಸ್ವಾಮಿಗಳು, ಗಂಗಾಧರ ಸ್ವಾಮೀಜಿ, ಮೇಘರಾಜ ಸ್ವಾಮೀಜಿ ಇದ್ದರು.

ಶಿಬಿರದ ಸಂಚಾಲಕರಾದ ಸಂಗಮೇಶ ಬಡಿಗೇರ, ವಿಶ್ವಕರ್ಮ ಸಮಾಜ ಮುಖಂಡರಾದ ಅಶೋಕ ಪತ್ತಾರ, ರುಕ್ಮಣ್ಣ ಪತ್ತಾರ, ಚಂದ್ರಶೇಖರ ಪತ್ತಾರ, ದೇವದತ್ತ ಬಡಿಗೇರ, ನಿಜಗುಣಿ ಕಮ್ಮಾರ, ಮಳಿಯಪ್ಪ ಬಡಿಗೇರ, ಮೌನೇಶ ಬಡಿಗೇರ, ಸಂಜು ಪತ್ತಾರ, ದಾನಪ್ಪ ಬಡಿಗೇರ, ದುಂಡಪ್ಪ ಬಡಿಗೇರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT