ಘಟಪ್ರಭಾ ಕಾಲುವೆಗೆ ನೀರು ಹರಿಸಿ

7
ಕಲಾದಗಿ, ಖಜ್ಜಡೋಣಿ ಭಾಗದ ರೈತರಿಂದ ಪ್ರತಿಭಟನೆ

ಘಟಪ್ರಭಾ ಕಾಲುವೆಗೆ ನೀರು ಹರಿಸಿ

Published:
Updated:
Deccan Herald

ಬಾಗಲಕೋಟೆ: ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಘಟಪ್ರಭಾ ಬಲದಂಡೆ ಕಾಲುವೆಯಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಖಜ್ಜಿಡೊಣಿ ಹಾಗೂ ಕಲಾದಗಿ ಭಾಗದ ರೈತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

2004ರಲ್ಲಿ ಕಾಲುವೆ ಸಿದ್ಧವಾಗಿದೆ. ಆದರೆ ಇಲ್ಲಿಯವರೆಗೆ ಕೇವಲ ನಾಲ್ಕು ಬಾರಿ ಮಾತ್ರ ನೀರು ಹರಿಸಲಾಗಿದೆ. ಅಲ್ಪ–ಸ್ವಲ್ಪ ಮಾತ್ರ ನೀರು ಬಿಡುಗಡೆ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಕಾಲುವೆಗೆ ಸಂಪೂರ್ಣ ನೀರು ಹರಿಸಿಲ್ಲ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.

ಯಾದವಾಡ, ಕೌಜಲಗಿ ಭಾಗದಲ್ಲಿ ಅವಧಿ ಮುಗಿದರೂ ಅಲ್ಲಿನ ರೈತರು ನಮ್ಮ ಅವಧಿಯನ್ನು ಬಳಕೆ ಮಾಡಿಕೊಂಡು ಜಮೀನಿಗೆ ನೀರು ಹರಿಸಿಕೊಳ್ಳುತ್ತಾರೆ. ಜೊತೆಗೆ ಕಾಲುವೆಗಳೂ ದುರಸ್ತಿಗೊಂಡಿಲ್ಲ. ಹೂಳು–ಮುಳ್ಳುಕಂಟಿಗಳಿಂದ ಕೂಡಿದೆ. ಮಳೆಗಾಲದ ಮೊದಲು ಅವುಗಳ ರಿಪೇರಿ ಮಾಡದೇ ನೀರು ಹಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀನಿಗೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ಬಿತ್ತಿದ ಬೆಳೆ ಕಮರಿ ಹೋಗುತ್ತಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಕಾಲುವೆಗಳಲ್ಲಿ ನೀರು ಹರಿಯದೇ ಅಂತರ್ಜಲ ಇಂಗಿ ಹೋಗಿ ಈ ಭಾಗದಲ್ಲಿ ಕೊಳವೆಬಾವಿಗಳು ಬತ್ತಿವೆ. ಕೃತಕವಾಗಿ ಬರಗಾಲದ ಸ್ಥಿತಿ ಸೃಷ್ಟಿಯಾಗಿದೆ ಎಂದು ಅಳಲು ತೋಡಿಕೊಂಡರು.

ಈ ಬಾರಿ ಜುಲೈ ತಿಂಗಳಲ್ಲಿಯೇ ಘಟಪ್ರಭಾ ಕಾಲುವೆಗೆ ನೀರು ಪೂರೈಸುವ ಹಿಡಕಲ್ ಜಲಾಶಯ ತುಂಬಿದೆ.  ಈ ಅವಧಿಯಲ್ಲಾದರೂ ಸಮರ್ಪಕವಾಗಿ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಬಿ.ಜಿ.ಮಂಟೂರ, ವೆಂಕಟೇಶ ರಂಗನ್ನವರ, ವೆಂಕಟೇಶ ಕರಿಗನ್ನವರ, ರಂಗನಗೌಡ ಹ.ಪಾಟೀಲ, ಅಣ್ಣೇಶಗೌಡ ಪಾಟೀಲ, ಈರಣ್ಣಾ ಬಡಿಗೇರ, ಪ್ರಕಾಶ ಯಾದವಾಡ, ಚಿದಾನಂದ ವಾಸನದ, ಜಿ.ಎಂ.ತುಪ್ಪದ, ವಾಲಪ್ಪ ಹುಣಿಶಿಕಟ್ಟಿ, ವೆಂಕಟೇಶ ಬಟಕುರ್ಕಿ, ನವೀನ ತಿರಕನ್ನವರ, ಜಿ.ಪಿ.ಶಿರೋಳ, ರಾಘವೇಂದ್ರ ನಾಗಪ್ಪನವರ ಮತ್ತಿತರರು ವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !