ಜಮಖಂಡಿ: ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಬೆಂಕಿಗೆ ತಗುಲಿ ಗಾಯಗೊಂಡ ಇಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ತಾಲ್ಲೂಕಿನ ಮಧುರಖಂಡಿಯ ಬಿಸ್ಮಿಲ್ಲಾ ದಸ್ತಗೀರಸಾಬ ನಾಗರಾಳ(28) ಜುಲೈ 9 ರಂದು ಮನೆಯಲ್ಲಿ ಬೆಂಕಿ ಹಚ್ಚಿಕಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಹಚ್ಚಿಕೊಂಡ ಬೆಂಕಿ ಮಕ್ಕಳಿಗೂ ತಗಲಿದ್ದರಿಂದ ಯಾಸಿದಾ(6), ಹಾಗೂ ಸನಾ(4) ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಹಿಳೆಯ ಪುತ್ರ 8 ವರ್ಷದ ಸಮೀರ್ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಪ್ರಕರಣದ ಕುರಿತು ಬಿಸ್ಮಿಲ್ಲಾರ ತಂದೆ ಫಕೀರಸಾಬ ಕುಳಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಬಿಸ್ಮಿಲ್ಲಾ ಪತಿ ದಸ್ತಗೀರಸಾಬ ನಾಗರಾಳರನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ: ದಸ್ತಗೀರಸಾಬ ನಾಗರಾಳ ಗೌಂಡಿ ಕೆಲಸವನ್ನು ಮಾಡುತ್ತಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದುಡಿದ ಹಣವನ್ನು ಕುಡಿದು ಖಾಲಿ ಮಾಡುತ್ತಿದ್ದ ಎನ್ನಲಾಗಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸೋಣ ಎಂಬ ಪತ್ನಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದನು. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಗ್ರಾಮದ ಹಿರಿಯರ ಮುಂದೆ ಪಂಚಾಯಿತಿ ನಡೆಸಿದಾಗ ಅದಕ್ಕೆ ಹಿರಿಯರ ಮುಂದೆ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಆದರೆ ಪತಿ ಕುಡಿದು ಬಂದು ಕಿರುಕುಳ ನೀಡುತ್ತಿರುವುದಕ್ಕೆ ಬಿಸ್ಮಿಲ್ಲಾ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.