ಮಂಗಳವಾರ, ಜನವರಿ 21, 2020
26 °C

ನಾಲ್ಕು ಸರ್ಕಾರಿ ಶಾಲೆಗಳ ನೆರವಿಗೆ ನಿಂತ ವಿಪ್ರೊ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಂಪೂರ್ಣ ಹಾನಿಗೀಡಾಗಿದ್ದ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಾಲ್ಕು ಅಂಗನವಾಡಿಗಳಿಗೆ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಿಕೊಡಲು ಬೆಂಗಳೂರಿನ ವಿಪ್ರೊ ಕಂಪೆನಿ ಮುಂದಾಗಿದೆ. ಇದಕ್ಕೆ ಅಂದಾಜು ₹10 ಕೋಟಿ ಖರ್ಚು ಮಾಡಲಿದೆ.

ಮಲಪ್ರಭಾ ನದಿ ಮುನಿಸಿಗೆ ತುತ್ತಾದ ಬಾದಾಮಿ ತಾಲ್ಲೂಕಿನ ತಳಕವಾಡ, ಬೀರನೂರು, ಮಣ್ಣೇರಿ ಮತ್ತು ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮುಧೋಳ ತಾಲ್ಲೂಕಿನ ಡವಳೇಶ್ವರದಲ್ಲಿ ಈ ಹೊಸ ಕಟ್ಟಡಗಳು ತಲೆ ಎತ್ತಲಿವೆ.

ಪ್ರಕ್ರಿಯೆ ಆರಂಭ: ‘ವಿಪ್ರೊ ಕಂಪೆನಿಯ ಹಿರಿಯ ಅಧಿಕಾರಿ ಜಗನ್ನಾಥ್ ಅವರನ್ನೊಳಗೊಂಡ ತಂಡ ಈಗಾಗಲೇ ಎರಡು ಬಾರಿ ಹಾನಿಗೀಡಾದ ಶಾಲೆಗಳನ್ನು ವೀಕ್ಷಿಸಿದೆ. ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಿಕೊಂಡಿದೆ’ ಎಂದು ಜಿಲ್ಲಾಧಿಕಾರಿ ಕ್ಯಾ.ಡಾ.ಕೆ.ರಾಜೇಂದ್ರ ಹೇಳುತ್ತಾರೆ.

‘ಶಾಲೆಗಳ ಪುನರ್‌ನಿರ್ಮಾಣಕ್ಕೆ ₹10 ಕೋಟಿವರೆಗೆ ವೆಚ್ಚ ಮಾಡುವುದಾಗಿ ಕಂಪೆನಿ ಪ್ರತಿನಿಧಿ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆ ಆಗಬೇಕಿದ್ದು, ಅವು ಪೂರ್ಣಗೊಂಡ ನಂತರ ಕೆಲಸ ಆರಂಭಿಸಲಿದ್ದಾರೆ’ ಎಂದು ತಿಳಿಸಿದರು.

‘ಕಟ್ಟಡ ಕಟ್ಟಿಕೊಡುವುದು ಮಾತ್ರವಲ್ಲ ಪೀಠೋಪಕರಣ, ಆಟದ ಮೈದಾನ, ಕಾಂಪೌಂಡ್, ಕಲಿಕಾ ಸಾಮಗ್ರಿ ವ್ಯವಸ್ಥೆ ಮಾಡಲಿದ್ದಾರೆ. ನಂತರ ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಮಾದರಿಯಾಗಿ ರೂಪಿಸಲು ತಾಂತ್ರಿಕ ನೆರವು ಒದಗಿಸಲಿದ್ದಾರೆ’ ಎಂದು ಹೇಳುತ್ತಾರೆ.

151 ಶಾಲಾ ಕಟ್ಟಡಗಳಿಗೆ ಹಾನಿ

ಪ್ರವಾಹದಿಂದ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 151 ಶಾಲಾ ಕಟ್ಟಡಗಳು ಹಾಗೂ 134 ಅಂಗನವಾಡಿಗಳು ಸಂಪೂರ್ಣ ಹಾನಿಗೀಡಾಗಿವೆ. ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ₹25.47 ಕೋಟಿ ಹಾಗೂ ಅಂಗನವಾಡಿಗಳಿಗೆ ₹5.76 ಕೋಟಿ ಅಂದಾಜು ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ.

ಭಾಗಶಃ ಹಾನಿಗೀಡಾದ 113 ಶಾಲೆಗಳ 316 ಕೊಠಡಿಗಳ ದುರಸ್ತಿಗೆ ₹2.69 ಕೋಟಿ ಹಾಗೂ 102 ಅಂಗನವಾಡಿ ಕಟ್ಟಡಗಳಿಗೆ ₹1.46 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್) ಜಿಲ್ಲಾಡಳಿತ ಹಣ ನೀಡಿದ್ದು, ದುರಸ್ತಿ ಕಾರ್ಯ ಆರಂಭವಾಗಿದೆ.

ದುರಸ್ತಿಗೆ ಕೈಜೋಡಿಸಿದ ಪಿಇಎಸ್

ಮುಧೋಳ ತಾಲ್ಲೂಕಿನ ಒಂಟಿಗೋಡಿ ಹಾಗೂ ಬಿ.ಕೆ.ಬುದ್ನಿ ಗ್ರಾಮಗಳಲ್ಲಿ ಘಟಪ್ರಭಾ ಪ್ರವಾಹದಿಂದ ಹಾನಿಗೀಡಾದ ಸರ್ಕಾರಿ ಶಾಲೆಗಳ ದುರಸ್ತಿಗೆ ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆ ಕೈಜೋಡಿಸಿದೆ. ₹40 ಲಕ್ಷ ವೆಚ್ಚದಲ್ಲಿ ಎರಡೂ ಶಾಲೆಗಳ ದುರಸ್ತಿ ಕಾರ್ಯವನ್ನು ಈಗಾಗಲೇ ಆರಂಭಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು