ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಬರಡು ನೆಲ ಹಸನಾಗಿಸಿದ 'ಬಂಗಾರದ ಮನುಷ್ಯ'ನ ಪರಿಶ್ರಮ

ವಿದೇಶದಿಂದ ಮರಳಿದ್ದ ಎಂಜಿನಿಯರ್ ಈಗ ಕೃಷಿಕನಾದ ಯಶೋಗಾಥೆ
Last Updated 5 ಜೂನ್ 2020, 5:48 IST
ಅಕ್ಷರ ಗಾತ್ರ

ಬಾಗಲಕೋಟೆ: ಹರಿದು ಹೋಗುವ ಮಳೆ ನೀರನ್ನು ತಡೆದು ನಿಲ್ಲಿಸಿ, ಅದನ್ನು ಅಲ್ಲಿಯೇ ಇಂಗಿಸಿದ ಕಾರಣ ತಾಲ್ಲೂಕಿನ ಕಿರಸೂರಿನ ರೈತ ಪ್ರಕಾಶ ಅಂಗಡಿ ಅವರ 11 ಎಕರೆ ಬರಡು ನೆಲ ಇಂದು ನಂದನವನವಾಗಿದೆ.

ಸೌದಿ ಅರೇಬಿಯಾದಲ್ಲಿ 20 ವರ್ಷಗಳ ಕಾಲ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದವರು ಪ್ರಕಾಶ. 2013ರಲ್ಲಿ ವಾಪಸ್ ಊರಿಗೆ ಮರಳಿದವರಿಗೆ ಇನ್ನು ವಿದೇಶದ ವಾಸ ಸಾಕು ಅನ್ನಿಸಿತ್ತು. ಬಾಲ್ಯದ ಕನಸಾದ ಕೃಷಿಯನ್ನೇ ಬದುಕಾಗಿಸಿಕೊಳ್ಳಬೇಕೆಂದುಕೊಂಡು ಕಿರಸೂರಿಗೆ ಮರಳಿದ್ದರು. ಹಿಂದೊಮ್ಮೆ ಬ್ಯಾಂಕಿನ ಲಿಲಾವಿನಲ್ಲಿ ಕೊಂಡಿದ್ದ ಬರಡು ಭೂಮಿಯನ್ನು ಹಸನಾಗಿಸಲು ಮುಂದಾದರು.

ಬರೋಬ್ಬರಿ 20 ಕೊಳವೆಬಾವಿ ಕೊರೆಸಿದ್ದರು

ಕೃಷಿಗೆ ಜೀವಜಲವೇ ಆಧಾರ. ಕಿರಸೂರಿನ ಹೊಲಕ್ಕೆ ಬಂದರೆ ಬೆಳೆಗೆ ಇರಲಿ ಕುಡಿಯಲು ಹನಿ ನೀರು ಸಿಗುತ್ತಿರಲಿಲ್ಲ. ಎಲ್ಲೆಲ್ಲೂ ಕಲ್ಲಿನ ರಾಶಿ, ಅದರಲ್ಲಿಎರಡು ಎಕರೆಯಲ್ಲಿ ಬರೀ ಕಲ್ಲು ಗುಡ್ಡವೇ ಆವರಿಸಿತ್ತು. ಅಲ್ಲಿ ನೀರು ತರಿಸಲು ಒಂದಲ್ಲಾ ಎರಡಲ್ಲಾ 20 ಕೊಳವೆ ಬಾವಿ ಕೊರೆಸಿದರು. 500 ಅಡಿ ಕೊರೆಸಿದರೂ ಒಂದಿಂಚು ನೀರು ಸಿಗಲಿಲ್ಲ. ಲಕ್ಷಾಂತರ ರೂಪಾಯಿ ಗಂಗೆ ಪಾಲಾಯಿತು.

'ಪ್ರಕಾಶ ಅವರದ್ದು ಹುಚ್ಚು ಪ್ರಯತ್ನ' ಎಂದೇ ಪರಿಚಿತರೇ ನಕ್ಕಿದ್ದರು. 'ವಿದೇಶದಲ್ಲಿ ದುಡಿದು ತಂದ ದುಡ್ಡು ಇಲ್ಲಿ ಚೆಲ್ಲುತ್ತಿದ್ದಾನೆ' ಎಂದು ವ್ಯಂಗ್ಯವಾಡಿದ್ದರು. ಟೀಕೆಗಳಿಗೆ ಬೇಸತ್ತು, ಅದೊಮ್ಮೆ ವಾಪಸ್ ಎಂಜಿನಿಯರ್ ಕೆಲಸಕ್ಕೆ ಹೋಗೋಣ ಎಂದು ನಿರ್ಧರಿಸಿದ್ದರು. ಆದರೆ ಭೂತಾಯಿ ನಂಬಿದರೆ ಕೈ ಬಿಡೊಲ್ಲ ಎಂಬ ನಂಬಿಕೆ ಮತ್ತೆ ಅವರನ್ನು ಕೃಷಿಯಲ್ಲಿ ಮುಂದುವರೆಸಿತ್ತು.

ಕಲ್ಲು ಬಂಡೆಗಳನ್ನು ಬ್ಲಾಸ್ ಮಾಡಿಸಿ ದಿನಕ್ಕೆ 400ರಿಂದ 500 ಆಳು ಹಚ್ಚಿ ಕಲ್ಲು ಆರಿಸಿ ಹಾಕಿಸಿದ್ದರು. ಆಗ ಅದು ಹೊಲ ಅನ್ನಿಸಿಕೊಳ್ಳುವ ಮಟ್ಟಕ್ಕೆ ನೆಲ ಹದಗೊಂಡಿತ್ತು. ಕೊನೆಗೆ 300ಕ್ಕೂ ಹೆಚ್ಚು ಟ್ರಿಪ್ ಕೆರೆ ಮಣ್ಣು ಹೊಡೆಸಿ ಇನ್ನಷ್ಟು ಹಸನಾಗಿಸಿದ್ದರು. ಕೊರೆಸಿದ್ದ ಕೊಳವೆ ಬಾವಿಗಳ ಪೈಕಿ ಮೂರರಲ್ಲಿ ನಿಧಾನವಾಗಿ ನೀರು ಹನಿಯ ತೊಡಗಿತ್ತು. ಆದರೆ ಬೇಸಿಗೆಯಲ್ಲಿ ಇರುತ್ತಿರಲಿಲ್ಲ. ಆ ನೀರು ನಂಬಿ ಬೆಳೆ ಬೆಳೆಯಲು ಸಾಧ್ಯವಿರಲಿಲ್ಲ.

ಮಳೆ ನೀರು ಹಿಡಿದಿಟ್ಟರು

ಈ ಹಂತದಲ್ಲಿ ಮಳೆ ನೀರು ಹಿಡಿದಿಡುವ ಚಿಂತನೆ ಅರಳಿತು. ಅದೊಮ್ಮೆ ಕೃಷಿ ಇಲಾಖೆ ಸಂಪರ್ಕಿಸಿ ಜಮೀನಿನಲ್ಲಿ 40x40 ವಿಸ್ತೀರ್ಣ 20 ಅಡಿ ಆಳದ ಕೃಷಿ ಹೊಂಡ ಮಾಡಿಸಿದರು. ಹೊಲ ಇಳಿಜಾರಿನಲ್ಲಿ ಇದ್ದ ಕಾರಣ ಬಿದ್ದ ಹನಿ ಮಳೆ ನೀರು ಹೊರಗೆ ಹೋಗದೇ ಸೀದಾ ಹೊಂಡಕ್ಕೆ ಹರಿದುಬರುವಂತೆ ಮಾಡಿದರು. ಸಮೀಪದಲ್ಲಿ ನೀರಾವರಿ ಹೊಲಗಳಲ್ಲಿ ಉಳಿದು ಹರಿದು ಹೋಗುತ್ತಿದ್ದ ನೀರನ್ನು ಕಾಲುವೆ ಮಾಡಿ ತಮ್ಮ ಜಮೀನಿಗೆ ತಂದು ಅದನ್ನು ಕೃಷಿ ಹೊಂಡಕ್ಕೆ ಸಂಪರ್ಕಿಸಿದರು. ಕಾಲುವೆಯ ಬದುಗಳನ್ನು ಸಿಮೆಂಟ್‌ನ ಬದಲು ಕಲ್ಲಿನಿಂದ ಅಲಂಕರಿಸಿದ ಕಾರಣ ಅದರಲ್ಲಿ ಹರಿಯುವ ನೀರು ಒಂದಷ್ಟು ಇಂಗ ತೊಡಗಿತು.

ಕೊಳವೆಬಾವಿ ಮರುಪೂರಣ

ಮಳೆಗಾಲದಲ್ಲಿ ಕೃಷಿ ಹೊಂಡ ತುಂಬಿ ಅದರಲ್ಲಿ ನೀರು ವ್ಯರ್ಥವಾಗಿ ಹೊರಗೆ ಹರಿದುಹೋಗದಂತೆ ತಡೆಯಲು ಆ ನೀರನ್ನು ಪೈಪ್ ಮೂಲಕ ಕೊಳವೆ ಬಾವಿಯ ಬುಡಕ್ಕೆ ಒಯ್ದು ಅಲ್ಲಿ ಇಂಗುವಂತೆ ಮಾಡಿದರು. ಅದಕ್ಕಾಗಿ ಕೊಳವೆ ಬಾವಿಯ ಸುತ್ತಲೂ 10x10 ಅಡಿ ವಿಸ್ತೀರ್ಣದಲ್ಲಿ ಗುಂಡಿ ತೋಡಿ ಅದಕ್ಕೆ ಜಲ್ಲಿ ಕಲ್ಲು–ಮರಳು ಮಿಶ್ರಣ ತುಂಬಿ ನೀರು ಮರುಪೂರಣ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಬೇಸಿಗೆಯಲ್ಲೂ ಸಮೃದ್ಧವಾಗಿ ಸಿಗುತ್ತಿದೆ ಎಂದು ಪ್ರಕಾಶ ಹೇಳುತ್ತಾರೆ.

ಹಿಂದೊಮ್ಮೆ ಮಳೆಗಾಲದಲ್ಲಿ ತೊಗರಿ ಮಾತ್ರ ಬೆಳೆಯುತ್ತಿದ್ದ ಜಮೀನು ಈಗ ಶೇಂಗಾ, ಸೂರ್ಯಪಾನ, ಈರುಳ್ಳಿ, ಮೆಕ್ಕೆಜೋಳದ ಸಮೃದ್ಧಿ ಕಂಡಿದೆ. ತೋಟಗಾರಿಕೆ ಬೆಳೆಗಳತ್ತಲೂ ಈಗ ಚಿತ್ತ ಹರಿಸಿದ್ದಾರೆ.

ಪ್ರಕಾಶ ಅವರದ್ದು ಅಕ್ಷರಶಃ 'ಬಂಗಾರದ ಮನುಷ್ಯ'ನ ಕಥಾನಕ. ಈ ಭಗೀರಥ ಪ್ರಯತ್ನದ ಹಿಂದೆ ಸತತ ಏಳು ವರ್ಷಗಳ ಶ್ರಮವಿದೆ. ನಿರಾಶೆ, ಆಶಾಭಾವಗಳ ಪ್ರತಿಫಲನವಿದೆ. ನೀರ ಹಾದಿಯಲ್ಲಿ ನಾಳೆಯನ್ನು ನೆಮ್ಮದಿಯಾಗಿಸಿಕೊಂಡ ಅವರ ಪ್ರಯತ್ನಕ್ಕೆ ಹಿಂದೆ ವ್ಯಂಗ್ಯವಾಡಿದವರೇ ಈಗ ಬೆನ್ನು ತಟ್ಟುತ್ತಿದ್ದಾರೆ. ಪ್ರಕಾಶ ಅಂಗಡಿ ಸಂಪರ್ಕ ಸಂಖ್ಯೆ: 9611458583.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT