ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಭಾಗ್ಯ ನೀಡಿದ ‘ಯೋಗ’

ರೋಗ ನಿವಾರಣೆಗೆ ಯೋಗವೇ ಮದ್ದು: ಮೈಲಾರಪ್ಪ
Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ಅಮೀನಗಡ: ‘ಮನುಷ್ಯನಿಗೆ ನಿತ್ಯ ಬದುಕಿನಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ. ಯೋಗ ಸಾಧನೆಯಿಂದ ಮಾನಸಿಕವಾಗಿ ಸದೃಢರಾಗಿದ್ದು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದವರೂ ನೆಮ್ಮದಿಯನ್ನು ಪಡೆದು ಬದುಕಿದವರಿದ್ದಾರೆ. ಅಮೀನಗಡ ಸಮೀಪದ ಕುಣಿಬೆಂಚಿ ಗ್ರಾಮದ 87ರ ವಯಸ್ಸಿನ ನಿವೃತ್ತ ಶಿಕ್ಷಕ ಮೈಲಾರಪ್ಪ ನಿಂಗಪ್ಪ ಅಂಗಡಿ ಯೋಗದಿಂದ ತಮ್ಮ ಬದುಕನ್ನು ಸುಂದರವಾಗಿಸಿಕೊಂಡಿದ್ದಾರೆ.

ಪ್ರತಿ ನಿತ್ಯ ಬೆಳಿಗ್ಗೆ 5 ಗಂಟೆಗೆ ಧ್ಯಾನ, ಪ್ರಾಣಾಯಾಮ, ಯೋಗಭ್ಯಾಸ ಮಾಡುವ ಇವರು ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ. ತಾವು ಯೋಗ ಸಾಧನೆ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ಪ್ರೇರಕವಾಗಿದ್ದಾರೆ. ತಮ್ಮ 65ನೇ ವಯಸ್ಸಿನಲ್ಲಿ ವಿವಿಧ ಕಾಯಿಲೆಗಳಿಗೆ ತುತ್ತಾದ ಅವರು ಕೆಮ್ಮು, ದಮ್ಮು, ಆಸ್ತಮಾ, ಮೊಣಕಾಲು, ಕೀಲುನೋವು, ರಕ್ತದೊತ್ತಡ, ಮಧುಮೇಹ ಈ ಎಲ್ಲ ರೋಗಗಳಿಂದ ಬಳಲಿದ್ದಾರೆ. ತುಂಬಾ ಯಾತನೆಯನ್ನು ಅನುಭವಿಸಿದ್ದಾರೆ. ಬಾಗಲಕೋಟೆಯಲ್ಲಿರುವ ಬಹುತೇಕ ಎಲ್ಲ ಆಸ್ಪತ್ರೆಗಳಿಗೆ ಧಾವಿಸಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನ ಕಾಣಲಿಲ್ಲ.

ಬದುಕಬೇಕೆಂಬ ದೃಢ ಮನಸ್ಸಿನಿಂದ ಯೋಗದ ಮೊರೆ ಹೋಗಿದ್ದಾರೆ. ಆಗ ಅಮೀನಗಡ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಹಜ ಸ್ಥಿತಿ ಯೋಗ ಶಿಬಿರ ಸೇರಿಕೊಂಡು ಧ್ಯಾನ, ಯೋಗ ರೂಢಿಸಿಕೊಂಡಿದ್ದಾರೆ. ತದನಂತರ ಮೈಸೂರಲ್ಲಿ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿ ಪ್ರಾಣಾಯಾಮ ಕಲಿತಿದ್ದಾರೆ. ಹುಬ್ಬಳ್ಳಿಯಲ್ಲಿ ಮತ್ತು ಬಾಗಲಕೋಟೆಯಲ್ಲಿ ನಡೆದ ಯೋಗ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡು ವಿವಿಧ ಭಂಗಿಗಳನ್ನು ಕಲಿತ ಅವರು 27 ವರ್ಷಗಳಿಂದ ಸತತವಾಗಿ ಅಭ್ಯಾಸ ಮಾಡುತ್ತಾ ಬಂದಿದ್ದಾರೆ.

‘ನಾನು ಅಂದು ಯೋಗಕ್ಕೆ ಮೊರೆ ಹೋಗದಿದ್ದರೆ ಇಷ್ಟು ದಿನ ಬದುಕಿರಲು ಸಾಧ್ಯವಾಗುತ್ತಿರಲ್ಲಿಲ್ಲ. ವೈದ್ಯರು ನನ್ನ ಕೈಬಿಟ್ಟರು ಆದರೆ ಯೋಗ ನನ್ನ ಕೈ ಬಿಡಲಿಲ್ಲ. ಯೋಗ, ಧ್ಯಾನಗಳಿಂದ ಹೊಸ ಬದುಕನ್ನು ಕಂಡುಕೊಂಡೆ. ಈಗ ನಾನು ಎಲ್ಲ ರೋಗಗಳಿಂದ ಮುಕ್ತವಾಗಿದ್ದಾನೆ. ಯಾವುದೇ ರೋಗವಿಲ್ಲದೆ ನಿರಾಳ ಬದುಕು ನನ್ನದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಪ್ರತಿನಿತ್ಯ ಬೆಳಿಗ್ಗೆ ಒಂದು ಹೊತ್ತು ಮಾತ್ರ ಆಹಾರ ಸೇವಿಸುತ್ತಾರೆ. ಜೂನ್ 14ರಿಂದ ಒಂದು ವಾರಗಳ ಕಾಲ ಹೂವಿನಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ. ಯೋಗವನ್ನು ತಾವು ರೂಢಿಸಿಕೊಂಡಷ್ಟೇ ಅಲ್ಲದೇ ಊರೂರು ಅಲೆದು ನೂರಾರು ಜನರಿಗೆ ಹೇಳಿಕೊಟ್ಟಿದ್ದಾರೆ. ಅಂಗಡಿ ಮಾಸ್ತರು ಯೋಗದಿಂದ ರೋಗವನ್ನು ಗೆದ್ದು ಬಂದಿದ್ದಾರೆ. ಇಂದಿನ ಯುವಕರು ದುಶ್ಚಟಕ್ಕೆ ದಾಸರಾಗದೇ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ’ ಎಂಬುದು ಅಂಗಡಿ ಮಾಸ್ತರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT