ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ₹1,011 ಕೋಟಿ ಕಬ್ಬು ಬಾಕಿ | ಸಕ್ಕರೆ ಮುಟ್ಟುಗೋಲು; ಹರಾಜಿಗೆ ಸಿದ್ಧತೆ

37 ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಡಳಿತಗಳಿಂದ ನೋಟಿಸ್ ಜಾರಿ
Last Updated 22 ಜೂನ್ 2019, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದ ಹತ್ತು ಜಿಲ್ಲೆಗಳ 37 ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆ ಮಾಡಿದ ರೈತರಿಗೆ ₹1,011 ಕೋಟಿ ಬಾಕಿ ಉಳಿಸಿಕೊಂಡಿವೆ. ಗಡುವು ಮೀರಿದರೂ ಬಾಕಿ ಪಾವತಿಸದ ಕಾರಣ ಕಾರ್ಖಾನೆಗಳಲ್ಲಿನ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಈ ಸಂಬಂಧ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತಾಲಯ ಜಪ್ತಿ ಪ್ರಮಾಣ ಪತ್ರ (ರಿಕವರಿ ಸರ್ಟಿಫಿಕೇಟ್) ವಿತರಿಸಿದೆ. ಅದನ್ನು ಆಧರಿಸಿ ಆಯಾ ಜಿಲ್ಲಾಡಳಿತ ಜೂನ್ 17ರಂದು ಸಂಬಂಧಿಸಿದ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿವೆ.

‘ಕಬ್ಬಿನ ಬಾಕಿಯನ್ನು ಏಳು ದಿನಗಳೊಳಗಾಗಿ ಪಾವತಿಸಿ ವರದಿ ನೀಡಬೇಕು. ಇಲ್ಲದಿದ್ದರೆ ಬಾಕಿ ಹಣವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಕಾರ್ಖಾನೆಗಳಲ್ಲಿನ ಸಕ್ಕರೆ ದಾಸ್ತಾನು ಹರಾಜು ಹಾಕಿ ರೈತರಿಗೆ ಹಣ ಪಾವತಿಸಲಾಗುವುದು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿ.ಎಂ ಸೂಚನೆ

ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಕೊಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಜೂನ್ ಮೊದಲ ವಾರ ಬೆಂಗಳೂರಿನಲ್ಲಿ ಧರಣಿ ನಡೆಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾರ್ಖಾನೆಗಳಲ್ಲಿನ ಸಕ್ಕರೆ ಹರಾಜು ಹಾಕಿ ಯಾದರೂ ರೈತರ ಬಾಕಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಜೂನ್ 11ರಂದು ಬೆಂಗಳೂರಿನಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತ ಕೆ.ಜಿ.ಶಾಂತಾರಾಮ್ ಸಭೆ ನಡೆಸಿ ತಕ್ಷಣ ಬಾಕಿ ಪಾವತಿಗೆ ಸೂಚಿಸಿದ್ದರು.

ಕೋಟಾ ಪದ್ಧತಿ ರದ್ದು ಮಾಡಿಸಿ

ಮಾರುಕಟ್ಟೆಗೆ ಪ್ರತಿ ತಿಂಗಳು ಇಷ್ಟೇ ಪ್ರಮಾಣದ ಸಕ್ಕರೆ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ ಕೋಟಾ ನಿಗದಿ ಮಾಡಿದೆ. ಹೀಗಾಗಿ ಸೀಮಿತ ಆದಾಯದಲ್ಲಿ ನಿಗದಿತ ಅವಧಿಯೊಳಗೆ ರೈತರಿಗೆ ಬಾಕಿ ಪಾವತಿ ಕಷ್ಟ. ಕೇಂದ್ರದ ಮೇಲೆ ಒತ್ತಡ ಹಾಕಿಕೋಟಾ ಪದ್ಧತಿ ರದ್ದುಪಡಿಸಿ ಎಂದು ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಒತ್ತಾಯಿಸಿದ್ದರು. ಅದಕ್ಕೆ ಮನ್ನಣೆ ದೊರೆತಿರಲಿಲ್ಲ. ಸಕ್ಕರೆ ಜೊತೆಗಿನ ಇತರೆ ಪೂರಕ ಉತ್ಪನ್ನಗಳ ಮಾರಾಟ ಮಾಡಿ ಬಾಕಿ ಪಾವತಿಗೆ ಸೂಚಿಸಲಾಗಿತ್ತು.

ಬಾಕಿ ಪಾವತಿ ಪ್ರಮಾಣ ಇಳಿಕೆ

‘ಬಾಗಲಕೋಟೆ ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆಗಳು ₹439 ಕೋಟಿ ಬಾಕಿ ಉಳಿಸಿಕೊಂಡಿದ್ದವು. ಜಿಲ್ಲಾಡಳಿತದಿಂದ ನೋಟಿಸ್ ಜಾರಿ ನಂತರ ಆ ಮೊತ್ತ₹280 ಕೋಟಿಗೆ ಇಳಿದಿದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳುತ್ತಾರೆ.

ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳು ಕಳೆದ ಹಂಗಾಮಿನಲ್ಲಿ 98,84,952 ಟನ್ ಕಬ್ಬು ನುರಿಸಿವೆ. ಸರ್ಕಾರ ನಿಗದಿಗೊಳಿಸಿದ ನ್ಯಾಯಯುತ ಹಾಗೂ ಲಾಭದಾಯಕ (ಎಫ್‌ಆರ್‌ಪಿ)ದರದ ಅನ್ವಯ ರೈತರಿಗೆ ಒಟ್ಟು ₹2,898 ಕೋಟಿ ಪಾವತಿಸಬೇಕಿತ್ತು.

ಕೆ.ಜಿ.ಶಾಂತಾರಾಮ್
ಕೆ.ಜಿ.ಶಾಂತಾರಾಮ್

* ಸಕ್ಕರೆ ಹರಾಜು ಹಾಕಿ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ಜವಾಬ್ದಾರಿ ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ವಹಿಸಿದೆ. ಅದಕ್ಕೆ ಪೂರಕವಾಗಿ ರಿಕವರಿ ಸರ್ಟಿಫಿಕೇಟ್ ನೀಡಲಾಗಿದೆ.

-ಕೆ.ಜಿ.ಶಾಂತಾರಾಮ್, ಆಯುಕ್ತರು, ರಾಜ್ಯ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT