ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭ ಶುಕ್ರವಾರ ನಾಮಪತ್ರ ಸಲ್ಲಿಕೆ ಭರಾಟೆ

ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲರಿಂದ ಮೆರವಣಿಗೆ
Last Updated 21 ಏಪ್ರಿಲ್ 2018, 12:06 IST
ಅಕ್ಷರ ಗಾತ್ರ

ವಿಜಯಪುರ: ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಪ್ರತ್ಯೇಕ ಮೆರವಣಿಗೆ ಮೂಲಕ ತೆರಳಿದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ಶುಕ್ರವಾರ ನಗರದಲ್ಲಿ ನಾಮಪತ್ರ ಸಲ್ಲಿಸಿದರು.

ಜಿಲ್ಲೆಯ ಪ್ರಭಾವಿ ನಾಯಕರಾದ ಯತ್ನಾಳ, ಎಂ.ಬಿ.ಪಾಟೀಲ ನಾಮಪತ್ರ ಸಲ್ಲಿಕೆಗೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಸಾಕ್ಷಿಯಾದರು. ಎತ್ತ ನೋಡಿದರತ್ತ ಕಾಂಗ್ರೆಸ್‌, ಬಿಜೆಪಿ ಬಾವುಟಗಳು ಹಾರಾಡಿದವು. ಜಯಘೋಷಗಳು ಮುಗಿಲು ಮುಟ್ಟಿದವು.

ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋರ್ಟ್‌ ವೃತ್ತದ ಬಳಿಯ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಯತ್ನಾಳ, ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಜಿಲ್ಲಾ ಪಂಚಾಯ್ತಿ ಕಚೇರಿ ಸನಿಹದ ಮಿನಿ ವಿಧಾನಸೌಧದಲ್ಲಿರುವ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯ ಬೆಂಬಲಿಗರು ‘ಬೋಲೋ ಭಾರತ್‌ ಮಾತಾ ಕೀ ಜೈ, ಹಿಂದೂ ಹುಲಿ ಯತ್ನಾಳಗೆ ಜಯವಾಗಲಿ’ ಎಂಬ ಘೋಷಣೆ ಮೊಳಗಿಸಿದರು. ಕೇಸರಿ ಧ್ವಜ, ಬಿಜೆಪಿ ಧ್ವಜ ಹಾರಾಡಿದವು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಲಾಯಿತು. ಸೆಲ್ಫಿಗೂ ಅನೇಕರು ಮುಗಿಬಿದ್ದರು.

ನಗರ ಹೊರ ವಲಯದ ತೊರವಿ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನ, ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ, ಇಲ್ಲಿನ ಸಿದ್ಧೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಶಿವಾಜಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಟಿಪ್ಪು ಸುಲ್ತಾನ್ ವೃತ್ತಗಳಿಗೆ ಭೇಟಿ ನೀಡಿ, ಪುತ್ಥಳಿಗಳಿಗೆ ಗೌರವ ಸಲ್ಲಿಸಿದ ನಂತರ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ತಮ್ಮ ಅಪಾರ ಬೆಂಬಲಿಗರೊಂದಿಗೆ ಜಲ ನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಎಂ.ಬಿ.ಪಾಟೀಲ ಆಗಮನಕ್ಕೂ ಮೊದಲೇ ವಿಡಿಎ ಎದುರು ಜಮಾಯಿಸಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರು ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ತಮ್ಮ ನಾಯಕನಿಗಾಗಿ ಕಾದು ನಿಂತಿದ್ದರು. ಪಾಟೀಲ ಬರುತ್ತಿದ್ದಂತೆ ‘ಕಾಂಗ್ರೆಸ್‌ಗೆ ಜಯವಾಗಲಿ, ಎಂ.ಬಿ.ಪಾಟೀಲಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.

11 ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಶುಕ್ರವಾರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಆರು ಕ್ಷೇತ್ರಗಳಿಗೆ 10 ಅಭ್ಯರ್ಥಿಗಳಿಂದ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮುದ್ದೇಬಿಹಾಳದಿಂದ ಸಿ.ಎಸ್‌.ನಾಡಗೌಡ, ಬಸವನಬಾಗೇವಾಡಿಯಿಂದ ಶಿವಾನಂದ ಶಿದ್ರಾಮಗೌಡ ಪಾಟೀಲ, ಭಾಗ್ಯಶ್ರೀ ಶಿವಾನಂದ ಪಾಟೀಲ, ಬಬಲೇಶ್ವರದಿಂದ ಎಂ.ಬಿ.ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ, ಇಂಡಿಯಿಂದ ದಯಾಸಾಗರ ಪಾಟೀಲ ಬಿಜೆಪಿ ಅಭ್ಯರ್ಥಿಗಳಾಗಿ, ಸಿಂದಗಿ, ಇಂಡಿ, ವಿಜಯಪುರದಿಂದ ಜೆಡಿಎಸ್‌ ಅಭ್ಯರ್ಥಿಗಳಾಗಿ ಎಂ.ಸಿ.ಮನಗೂಳಿ, ಬಿ.ಡಿ.ಪಾಟೀಲ, ರೇಷ್ಮಾ ಕೌಸರ ಖಾಜಾ ಬಂದೇನವಾಜ ಪಡೇಕನೂರ ಕ್ರಮವಾಗಿ ನಾಮಪತ್ರ ಸಲ್ಲಿಸಿದರು.

ಇಂಡಿಯಿಂದ ಪಕ್ಷೇತರರಾಗಿ ಉಮರ್‌ ಫಾರೂಖ್‌ ಬಾಗವಾನ ನಾಮಪತ್ರ ಸಲ್ಲಿಸಿದರೆ, ನಾಗಠಾಣ, ದೇವರಹಿಪ್ಪರಗಿಯಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ತಿಳಿಸಿದ್ದಾರೆ.

ಬೈಕ್‌ ವಶಕ್ಕೆ

ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ನಾಮಪತ್ರ ಸಲ್ಲಿಕೆ ವೇಳೆ ನಡೆದ ಮೆರವಣಿಗೆಯಲ್ಲಿ ಪರವಾನಗಿ ಇಲ್ಲದೆ ತಂದಿದ್ದ, ಕೇಸರಿ ಬಣ್ಣ ಬಳಿದಿರುವ ನಂಬರ್ ಪ್ಲೇಟ್‌ ಇಲ್ಲದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT