ಕರಿಎಳ್ಳು ಬೆಳೆಗೆ ರೋಗ: ಸಂಕಷ್ಟದಲ್ಲಿ ರೈತ

7
ಹೊಲಗಳಲ್ಲಿ ಕಟಾವು ಮಾಡದೆ ಹಾಗೆಯೇ ಬಿಡಲಾಗಿರುವ ಅಪಾರ ಪ್ರಮಾಣದ ಬೆಳೆ

ಕರಿಎಳ್ಳು ಬೆಳೆಗೆ ರೋಗ: ಸಂಕಷ್ಟದಲ್ಲಿ ರೈತ

Published:
Updated:
ಚನ್ನಪಟ್ಟಣ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮದಲ್ಲಿ ಕರಿಎಳ್ಳು ಬೆಳೆ ರೋಗಕ್ಕೆ ತುತ್ತಾಗಿರುವುದು

ಚನ್ನಪಟ್ಟಣ: ತಾಲ್ಲೂಕಿನ ಹಲವು ಗ್ರಾಮದಲ್ಲಿ ಬೆಳೆದಿರುವ ಕರಿಎಳ್ಳು ಬೆಳೆ ರೋಗಕ್ಕೆ ತುತ್ತಾಗಿದ್ದು, ಕೈಗೆ ಬಂದ ಬೆಳೆ ಬಾಯಿಗೆ ಬರದಂತೆ ಆಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮುಂಗಾರು ಪೂರ್ವ ಮತ್ತು ನಂತರ ಮಳೆ ಉತ್ತಮವಾಗಿ ಬಿದ್ದ ಕಾರಣ ರೈತರು ಕರಿ ಎಳ್ಳು ಬಿತ್ತನೆ ಮಾಡಿದ್ದರು. ಬೆಳೆ ಸಮೃದ್ಧಿವಾಗಿ ಬಂದ ಕಾರಣ ಸಂತಸಪಟ್ಟಿದ್ದರು. ಆದರೆ, ಫಸಲು ಬಂದು ಕಾಳು ಕಟ್ಟುವ ಸಮಯದಲ್ಲಿ ರೋಗಕ್ಕೆ ತುತ್ತಾಗಿದೆ. ಹೊನ್ನಿಗನಹಳ್ಳಿ, ವಡ್ಡರಹಳ್ಳಿ, ಜೆ.ಬ್ಯಾಡರಹಳ್ಳಿ, ಕಾರೇಕೊಪ್ಪ, ಮಾದೇಗೌಡನದೊಡ್ಡಿ ಗ್ರಾಮಗಳಲ್ಲಿ ರೈತರು ನೂರಕ್ಕೂ ಅಧಿಕ ಎಕರೆಯಲ್ಲಿ ಕರಿಎಳ್ಳು ಬೆಳೆ ಬಿತ್ತನೆ ಮಾಡಿದ್ದರು. ಫಸಲು ಬಂದು ಕಟಾವಿನ ಹಂತ ತಲುಪಿದ್ದರೂ ಗಿಡಗಳಲ್ಲಿ ಫಸಲು ಇಲ್ಲದೆ ರೋಗಕ್ಕೆ ತುತ್ತಾಗಿ ಬರೀ ಜೊಳ್ಳು ಕಾಳುಗಳಿವೆ. ಇದರಿಂದ ಬೆಳೆ ಕಟಾವು ಮಾಡಲೂ ಹಾಗೆಯೇ ಬಿಡಲಾಗಿದೆ.

ಉತ್ತಮ ಮಳೆ ಹಿನ್ನೆಲೆಯಲ್ಲಿ ಕರಿಎಳ್ಳು ಬೆಳೆಯಲಾಗಿದೆ. ಆದರೆ, ಕಟಾವಿನ ಹಂತ ತಲುಪಿದಾಗ ರೋಗ ತಗುಲಿದ್ದು, ಸಂಪೂರ್ಣ ಸುಟ್ಟ ರೀತಿಯಲ್ಲಿ ಬೆಳೆ ಒಣಗಿದೆ ಎಂದು ಹೊನ್ನಿಗನಹಳ್ಳಿ ರೈತ ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಪ್ರತಿ ವರ್ಷವೂ ಉತ್ತಮ ಫಸಲು ಬರುತ್ತಿತ್ತು. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದೆವು. ಆದರೆ, ಬೆಳೆ ಕೈಕೊಟ್ಟಿದೆ ಎಂದು ರೈತರಾದ ಮಲ್ಲೇಶ್, ರಮೇಶ್, ರಾಜಣ್ಣ ನೋವು ತೋಡಿಕೊಂಡರು.

ಎಕರೆಗಟ್ಟಲೆ ಎಳ್ಳುಬೆಳೆ ಬೆಳೆದಿದ್ದರೂ ಅದನ್ನು ಕೊಯ್ದು ಒಕ್ಕಣೆ ಮಾಡಿದರೆ ಫಸಲು ಮಾತ್ರ ಶೇ 10 ರಷ್ಟು ಸಹ ಸಿಗುವುದಿಲ್ಲ. ಫಸಲು ಬರುವ ಕಡೇ ಹಂತದಲ್ಲಿ ರೋಗ ತಗುಲಿರುವ ಕಾರಣ ಇದಕ್ಕೆ ಔಷಧ ಸಿಂಪಡಿಸಲೂ ಸಾಧ್ಯವಾಗಲಿಲ್ಲ. ಯಾವುದೇ ರೋಗ ಲಕ್ಷಣ ಕಾಣದ ಕಾರಣ ಕೃಷಿ ಇಲಾಖೆ ಕೂಡ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ರೈತ ನಾಗರಾಜು ತಿಳಿಸಿದರು.

‘ಪ್ರತಿ ಕೆ.ಜಿಗೆ ₹100 ರಿಂದ ₹ 150 ಬೆಲೆ ಸಿಗಬೇಕಿತ್ತು. ಆದರೆ, ಈ ಬಾರಿ ಬೆಳೆಗೆ ಬಂದಿರುವ ರೋಗದಿಂದಾಗಿ ಕೇವಲ ₹60 ರಿಂದ ₹70 ಮಾರಾಟ ಮಾಡುವ ದುಸ್ಥಿತಿ ಎದುರಾಗಿದೆ' ಎಂದರು.

ಈಗ ರೋಗಕ್ಕೆ ತುತ್ತಾಗಿರುವ ಬೆಳೆ ಕಟಾವು ಮಾಡಿದರೂ ಪ್ರಯೋನ ಇಲ್ಲ. ಬೆಳೆಗೆ ಮಾಡಿರುವ ಖರ್ಚು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಆದ್ದರಿಂದ ಎಳ್ಳು ಬೆಳೆಯನ್ನು ಟ್ಯ್ರಾಕ್ಟರ್ ಬಳಸಿ ಭೂಮಿಯಲ್ಲಿಯೇ ಹೂಳಲು ನಿರ್ಧರಿಸಿದ್ದೇವೆ ಎಂದು ರೈತ ಮಹಿಳೆ ಪುಟ್ಟಮ್ಮ ತಿಳಿಸಿದರು.

ಈ ಭಾಗದಲ್ಲಿ ಕೃಷಿ ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ರೈತರ ನೆರವಿಗೆ ಧಾವಿಸಲು ರೈತರು ಆಗ್ರಹಿಸಿದ್ದಾರೆ.
- ಎಚ್.ಎಂ.ರಮೇಶ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !