ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಹೇಮಕೂಟ ಪರ್ವತದ 3ಡಿ ವೇದಿಕೆ

6 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ; ಉತ್ಸವಕ್ಕೆ ₹15 ಕೋಟಿ ಖರ್ಚು
Last Updated 24 ಜನವರಿ 2023, 16:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಈ ಸಲದ ಹಂಪಿ ಉತ್ಸವದ ಪ್ರಧಾನ ಕಾರ್ಯಕ್ರಮ ನಡೆಯಲಿರುವ ಗಾಯತ್ರಿ ಪೀಠದ ಮುಖ್ಯ ವೇದಿಕೆಯನ್ನು ಹೇಮಕೂಟ ಪರ್ವತದ 3ಡಿ ಮಾದರಿಯಲ್ಲಿ ನಿರ್ಮಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ಮಂಗಳವಾರ ಸಂಜೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 110 ಅಡಿ ಉದ್ದ, 80 ಅಡಿ ಅಗಲದ ವೇದಿಕೆಯನ್ನು ಫೈಬರ್‌ನಿಂದ ನಿರ್ಮಿಸಲಾಗಿದೆ. ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಮೊದಲ ಬಾರಿಗೆ ಹೇಮಕೂಟ ಪರ್ವತದ ಮಾದರಿಯನ್ನು ಆಯ್ಕೆ ಮಾಡಲಾಗಿದೆ. ಏಕಕಾಲಕ್ಕೆ 55 ಸಾವಿರ ಜನ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಅತಿ ಗಣ್ಯರಿಗೆ 20 ಸಾವಿರ ಪಾಸ್‌ ನೀಡಲಾಗುವುದು ಎಂದು ವಿವರಿಸಿದರು.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ ಹಾಗೂ ಸಾಸಿವೆ ಕಾಳು ಗಣಪ ಸ್ಮಾರಕದ ಬಳಿ ಇತರೆ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಹೊರರಾಜ್ಯ, ಹೊರ ಜಿಲ್ಲೆ ಹಾಗೂ ಸ್ಥಳೀಯ ಸುಮಾರು 270 ಕಲಾ ತಂಡಗಳ ಆರು ಸಾವಿರ ಕಲಾವಿದರು ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಿಕೊಡುವರು. ಜ. 26ರಂದು ಸಂಜೆ 4ಕ್ಕೆ ನಗರದಲ್ಲಿ ನಡೆಯಲಿರುವ ‘ವಸಂತ ವೈಭವ’ ಮೆರವಣಿಗೆಯಲ್ಲಿ 100 ಕಲಾ ತಂಡಗಳು ಭಾಗವಹಿಸಲಿವೆ. ಆಶಾ ಹಾಗೂ ಸ್ವಸಹಾಯ ಮಹಿಳಾ ಗುಂಪುಗಳ 2,500 ಮಹಿಳೆಯರು ಪಾಲ್ಗೊಳ್ಳುವರು. ವಡಕರಾಯ ದೇವಸ್ಥಾನದಿಂದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಯಲಿದೆ. ಅನಂತರ 20 ನಿಮಿಷಗಳ ಲೇಸರ್‌ ಶೋ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಮೂರು ದಿನಗಳ ಉತ್ಸವದಲ್ಲಿ 8ರಿಂದ 9 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ₹15 ಕೋಟಿ ಖರ್ಚಾಗುವ ಅಂದಾಜು ಇದೆ. ₹10 ಕೋಟಿ ಜಿಲ್ಲಾಡಳಿತ ಭರಿಸಿದರೆ, ಕೈಗಾರಿಕೆಗಳು, ದಾನಿಗಳ ನೆರವು ಪಡೆಯಲಾಗುತ್ತಿದೆ. ಎಲ್ಲಾ ಹೋಟೆಲ್‌ನವರು ಶೇ 50ರಷ್ಟು ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಕೊಡಲು ಮುಂದೆ ಬಂದಿದ್ದಾರೆ. ಕಲಾವಿದರಿಗಾಗಿ ಶಾಲೆ, ಹಾಸ್ಟೆಲ್‌, ಕಲ್ಯಾಣ ಮಂಟಪಗಳನ್ನು ಪಡೆಯಲಾಗಿದೆ. ಹಂಪಿಯ ಎರಡು ಕಡೆಗಳಲ್ಲಿ ಆಹಾರ ಮಳಿಗೆಗಳಿವೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಉದ್ಘಾಟನೆ: ಜ.27ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸ್ವಾಮೀಜಿಗಳು, ಜನಪ್ರತಿನಿಧಿಗಳು ಭಾಗವಹಿಸುವರು. ಇದಕ್ಕೂ ಮುನ್ನ ಸಂಜೆ 4ಕ್ಕೆ ಶೋಭಾಯಾತ್ರೆ ನಡೆಯಲಿದ್ದು, 40 ಕಲಾ ತಂಡಗಳು ಅದರಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಹೊಸ ಜಿಲ್ಲೆಯಾದ ನಂತರ ಎಲ್ಲವೂ ಹೊಸದಾಗಿ ಆರಂಭಿಸುವ ಸವಾಲು. ವಿಧಾನಸಭೆ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಆದರೆ, ಯಾವುದೇ ರೀತಿಯ ಕೊರತೆ ಆಗದಂತೆ ಸಂಘಟಿಸಲಾಗುತ್ತಿದೆ. ನಾನು ಜಿಲ್ಲಾಧಿಕಾರಿ ಆದ ನಂತರ ಪ್ರಥಮ ಉತ್ಸವ. ನಮ್ಮ ಅಧಿಕಾರಿ ವರ್ಗ ಕಳೆದೊಂದು ತಿಂಗಳಿಂದ ಶ್ರಮವಹಿಸಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇಂದು ತುಂಗಾ ಆರತಿ: ಹಂಪಿ ತುಂಗಭದ್ರಾ ನದಿ ತಟದಲ್ಲಿ ಬುಧವಾರ (25) ಸಂಜೆ 6ಕ್ಕೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

120 ಸಿಸಿಟಿವಿ ಕ್ಯಾಮೆರಾ, 10 ಸಹಾಯವಾಣಿ:

‘ಹಂಪಿ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ತಡೆಗೆ 14 ಅತ್ಯಾಧುನಿಕ ಸೇರಿದಂತೆ ಒಟ್ಟು 120 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹತ್ತು ಕಡೆಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.

7 ಡಿವೈಎಸ್ಪಿ, 33 ಇನ್‌ಸ್ಪೆಕ್ಟರ್‌, 70 ಸಬ್-ಇನ್‌ಸ್ಪೆಕ್ಟರ್‌, 191 ಎಎಸ್‌ಐ, 1074 ಕಾನ್‌ಸ್ಟೆಬಲ್‌ಗಳು, 600 ಗೃಹರಕ್ಷಕ ದಳದ ಸಿಬ್ಬಂದಿ, 4 ಕೆಎಸ್‌ಆರ್‌ಪಿ, 1 ಡಿಎಆರ್ ತುಕಡಿ ಇರಲಿದೆ. 113 ಜನ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಸೇವೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಂಪಿ ಪರಿಸರದಲ್ಲಷ್ಟೇ ಉಚಿತ ಬಸ್‌:

‘ಸುಗಮ ವಾಹನಗಳ ಸಂಚಾರಕ್ಕಾಗಿ ತಾಲ್ಲೂಕಿನ ಕಡ್ಡಿರಾಂಪುರ ಕ್ರಾಸ್‌ನಿಂದ ಕಮಲಾಪುರದ ವರೆಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಹೋಗಲು 120 ಬಸ್‌ಗಳ ಉಚಿತ ವ್ಯವಸ್ಥೆ ಮಾಡಲಾಗಿದೆ. ಪ್ರತಿ 5 ನಿಮಿಷಕ್ಕೊಂದು ಬಸ್‌ ಸಂಚರಿಸಲಿವೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ಹೊಸಪೇಟೆ ಸೇರಿದಂತೆ ಇತರೆ ಕಡೆಗಳಿಂದ ಬರುವವರು ಕಡ್ಡಿರಾಂಪುರದ ವರೆಗೆ ಬರಬೇಕು. ಅಲ್ಲಿಂದ ಉಚಿತ ಬಸ್‌ ಸೌಲಭ್ಯದ ಪ್ರಯೋಜನ ಪಡೆಯಬಹುದು. ವಾಹನಗಳ ನಿಲುಗಡೆಗೆ ರೈತರ ಜಮೀನು ಪಡೆಯಲಾಗಿದ್ದು, ಏಕಕಾಲಕ್ಕೆ 6 ಸಾವಿರ ವಾಹನಗಳನ್ನು ನಿಲ್ಲಿಸಬಹುದು ಎಂದು ಹೇಳಿದರು.

ಉತ್ಸವದಲ್ಲಿ ಏನೇನಿರಲಿದೆ?:

ಚಿತ್ರಕಲಾ ಶಿಬಿರ, ಹಂಪಿ ಬೈ ಸ್ಕೈ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಮರಳು ಶಿಲ್ಪಕಲಾ ಪ್ರದರ್ಶನ, ಲೇಸರ್‌ ಶೋ, ವಸಂತ ವೈಭವ, ಆಹಾರ ಮೇಳ, ಕವಿಗೋಷ್ಠಿ, ವಿಚಾರ ಸಂಕಿರಣ, ಸಾಹಸ ಕ್ರೀಡೆ, ಜಲ ಕ್ರೀಡೆ, ಕುಸ್ತಿ, ಗ್ರಾಮೀಣ ಕ್ರೀಡೆಗಳು, ಸಂಗೀತ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆ.

ಸ್ಯಾಂಡಲ್‌ವುಡ್‌, ಬಾಲಿವುಡ್‌ ಕಲಾವಿದರು:

ಉತ್ಸವದಲ್ಲಿ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವರು. ಬಾಲಿವುಡ್‌ ಗಾಯಕರಾದ ಅಂಕಿತ್‌ ತಿವಾರಿ, ಅರ್ಮಾನ್‌ ಮಲಿಕ್‌, ಕೈಲಾಶ್‌ ಖೇರ್‌, ಸ್ಯಾಂಡಲ್‌ವುಡ್‌ ಕಲಾವಿದರಾದ ವಿಜಯ್‌ ಪ್ರಕಾಶ್‌, ಅರ್ಜುನ್‌ ಜನ್ಯ, ರಘು ದೀಕ್ಷಿತ್‌, ಎಂ.ಡಿ. ಪಲ್ಲವಿ, ಕಲಾವತಿ ದಯಾನಂದ್‌ ಹಾಗೂ ತಂಡದವರು ಸೇರಿದ್ದಾರೆ.

‘ಜಿಲ್ಲಾ ಶಿಷ್ಟಾಚಾರ ಪಾಲನೆ’:

‘ಜಿಲ್ಲಾ ಹಾಗೂ ರಾಜ್ಯಮಟ್ಟದ ಎರಡು ಪ್ರಕಾರದ ಶಿಷ್ಟಾಚಾರಗಳಿರುತ್ತವೆ. ಹಂಪಿ ಉತ್ಸವಕ್ಕೆ ಜಿಲ್ಲಾಮಟ್ಟದ ಶಿಷ್ಟಾಚಾರ ಪಾಲನೆ ಮಾಡಿದ್ದು, ಅದರ ಪ್ರಕಾರವೇ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ರಾಜ್ಯಮಟ್ಟದ ಪ್ರೊಟೊಕಾಲ್‌ ಇದ್ದರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನು ಕರೆಯಬಹುದಿತ್ತು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT