ಬಳ್ಳಾರಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಭಾರತದ ಶಿಕ್ಷಣ ಪದ್ಧತಿ ಬ್ರಿಟಿಷ್ ವಸಾಹತುಶಾಹಿ ಶಿಕ್ಷಣದ ಮುಂದುವರಿದ ಭಾಗವಾಗಿದೆ. ಇದಕ್ಕೆ ಪರ್ಯಾಯವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದು, ಕರ್ನಾಟಕ ಮೊದಲಿಗೆ ಜಾರಿಗೊಳಿಸಿದ ರಾಜ್ಯವಾಗಿದೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು.
ಹೊಸ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾಗಿದೆ. ಪ್ರರ್ವಾಗ್ರಹ ಪೀಡಿತವಾಗಿದೆ. ರಾಜಕೀಯ ಪ್ರೇರಿತವಾಗಿದೆ ಎಂದು ಟೀಕಿಸಿದರು.
ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್ ಕುಮಾರ್, ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬೆಟಿಗೇರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಹುಲ್ಲೇಶ್ ಕೋಮಾಲಿಕ, ನಗರ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಕಾರ್ಯಕರ್ತರಾದ ನವೀನ್, ಬಸವ, ಇಂದ್ರಾರೆಡ್ಡಿ, ಶ್ರೀಕಾಂತ್, ಐಶ್ವರ್ಯಾ, ಪೂರ್ಣಿಮಾ, ರಂಜಿತಾ, ರಾಜೇಶ್ ಮತ್ತಿತರರು ಭಾಗವಹಿಸಿದ್ದರು.
ಮುನ್ಸಿಪಲ್ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಎಬಿವಿಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Cut-off box - ಕಟ್ಟಡ ಕಾರ್ಮಿಕರ ಪ್ರತಿಭಟನೆ ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಇಲ್ಲಿನ ಕೌಲ್‌ಬಜಾರ್ ಪ್ರದೇಶದಲ್ಲಿರುವ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಕಟ್ಟಡ ಕಾರ್ಮಿಕರು ಕಾರ್ಮಿಕ ಕಚೇರಿ ಮುಂದೆ ಕೆಲಹೊತ್ತು ಧರಣಿ ನಡೆಸಿ ಕಾರ್ಮಿಕ ಅಧಿಕಾರಿ ಅಲ್ತಾಫ್ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಸಂಘಟನೆ ಮುಖಂಡರಾದ ಜೆ. ಸತ್ಯಬಾಬು ಹೊನ್ನೂರ ಸಾಬ್ ಸಂಡೂರು ವಿ. ದೇವಣ್ಣ ಸಿರುಗುಪ್ಪ ಸುರೇಶ್ ಕಂಪ್ಲಿ ನಾಗರಾಜ್ ಕುಡತಿನಿ ಭರಮರೆಡ್ಡಿ ಬೆಳಗಲ್ಲು ತಾಂಡಾದ ಶಿವನಾಯ್ಕ ಮುಂತಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.