ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ಸೂರ್ಯಕಾಂತಿಗೆ ರೋಗ: ರೈತರು ಕಂಗಾಲು

ಇಟ್ಟಿಗಿ, ಉತ್ತಂಗಿಯ ಕೆಲವು ಹೊಲಗಳಲ್ಲಿ ರೋಗ ಪತ್ತೆ
Published : 4 ಆಗಸ್ಟ್ 2024, 14:31 IST
Last Updated : 4 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಹೋಬಳಿಯಲ್ಲಿ ಸೂರ್ಯಕಾಂತಿ ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ರೋಗಪೀಡಿತ ಗಿಡಗಳು ಸತ್ವ ಕಳೆದುಕೊಂಡು, ತೆನೆ ಕತ್ತರಿಸಿ ಬೀಳುತ್ತಿವೆ. ಈ ಭಾಗದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೋಗಬಾಧೆಯಿಂದ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತವಾಗಿ ಸೂರ್ಯಕಾಂತಿ ಬೆಳೆಯಲಾಗುತ್ತದೆ. ಕಳೆದೆರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಸೂರ್ಯಕಾಂತಿಯತ್ತ ಮುಖ ಮಾಡಿದ್ದು, ತಾಲ್ಲೂಕಿನಲ್ಲಿ 700 ಹೆಕ್ಟೇರ್ ನಲ್ಲಿ ಈ ಬೆಳೆ ವಿಸ್ತರಣೆಯಾಗಿದೆ. ನಿರಂತರವಾಗಿ ತುಂತುರು ಮಳೆ ಸುರಿಯುತ್ತಿರುವುದರಿಂದ ಸೂರ್ಯಕಾಂತಿ ಸೇರಿದಂತೆ ಎಲ್ಲ ಬೆಳೆಗಳು ಹುಲುಸಾಗಿ ಬೆಳೆದಿವೆ. ಹೂವಾಡುವ, ಕಾಳು ಕಟ್ಟುವ ಹಂತದಲ್ಲಿ ಸೂರ್ಯಕಾಂತಿ ಬೆಳೆ ರೋಗಕ್ಕೆ ತುತ್ತಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಉತ್ತಂಗಿ, ಇಟ್ಟಿಗಿ, ತಳಕಲ್ಲು, ಮಹಾಜನದಹಳ್ಳಿ ಭಾಗದ ಆಯ್ದ ಹೊಲಗಳಲ್ಲಿ ತೆನೆ ಕತ್ತರಿಸುವ ರೋಗ ಕಾಣಿಸಿಕೊಂಡಿದೆ. ಮುಂಗಾರು ಬೆಳೆ ಕೈ ಹಿಡಿಯುವ ನಿರೀಕ್ಷೆಯೊಂದಿಗೆ ರೈತರು ಬಿತ್ತನೆ ಮಾಡಿದ್ದರು. ಬೆಳೆಗೆ ವಿಚಿತ್ರ ರೋಗ ತಗುಲಿರುವುದರಿಂದ ಸೂರ್ಯಕಾಂತಿ ಬೆಳೆ ಬಾಡಿದಂತೆ ರೈತರ ಮುಖವೂ ಕಳೆಗುಂದಿದೆ.

‘ಹೂವಾಡುವ, ಕಾಳು ಕಟ್ಟುವ ಹಂತದಲ್ಲಿ ಸೂರ್ಯಕಾಂತಿ ಗಿಡಗಳು ಬಾಡಲಾರಂಭಿಸಿವೆ. ತೆನೆ ಕತ್ತರಿಸಿ ನೆಲಕ್ಕೆ ಬೀಳುತ್ತಿವೆ. ಈ ಹಂತದ ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ತೋಚುತ್ತಿಲ್ಲ’ ಎಂದು ಉತ್ತಂಗಿಯ ರೈತರಾದ ಶಿವಚಿಂಪಿಗರ ಕೊಟ್ರಪ್ಪ, ಬೇವೂರು ಪ್ರಕಾಶ್ ಅಳಲು ತೋಡಿಕೊಂಡಿದ್ದಾರೆ.

ಬರಗಾಲದ ನಡುವೆ ರೈತರು ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದಾರೆ. ಇದೀಗ ನೆಚ್ಚಿದ ಬೆಳೆಯೂ ಕೈ ಹಿಡಿಯುವ ವಿಶ್ವಾಸವಿಲ್ಲ. ಸಂಬಂಧಿಸಿದ ಅಧಿಕಾರಿಗಳು ರೋಗಪೀಡಿತ ಹೊಲಗಳನ್ನು ಪರೀಕ್ಷಿಸಿ, ಪರಿಹಾರಕ್ಕೆ ಶಿಫಾರಸು ಮಾಡಬೇಕು. ಸರ್ಕಾರ ಕನಿಷ್ಟ ಪಕ್ಷ ಹಿಂಗಾರಿ ಬೆಳೆಗಳನ್ನು ಬೆಳೆಯಲು ಬೀಜ, ಗೊಬ್ಬರವನ್ನಾದರೂ ಉಚಿತವಾಗಿ ನೀಡಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ. ಸಿದ್ದೇಶ್ ಆಗ್ರಹಿಸಿದ್ದಾರೆ.

ಉತ್ತಂಗಿಯಲ್ಲಿ ರೋಗಪೀಡಿತ ಸೂರ್ಯಕಾಂತಿಯ ತೆನೆ ಕತ್ತರಿಸಿ ಬಿದ್ದಿರುವುದು.
ಉತ್ತಂಗಿಯಲ್ಲಿ ರೋಗಪೀಡಿತ ಸೂರ್ಯಕಾಂತಿಯ ತೆನೆ ಕತ್ತರಿಸಿ ಬಿದ್ದಿರುವುದು.

ರಸ ಹೀರುವ ಕೀಟದಿಂದ ಈ ರೋಗ ವ್ಯಾಪಿಸಿರುವ ಸಾಧ್ಯತೆ ಇದೆ. ಸೋಮವಾರ ರೋಗಪೀಡಿತ ಹೊಲಗಳಿಗೆ ಭೇಟಿ ವಿಜ್ಞಾನಿಗಳೊಂದಿಗೆ ನೀಡಿ ಕೀಟ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡುತ್ತೇವೆ

-ಮಹ್ಮದ್ ಆಶ್ರಫ್ ಸಹಾಯಕ ಕೃಷಿ ನಿರ್ದೇಶಕ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT