ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಕ್ಷೇತ್ರದಲ್ಲಿ ಮಗನಿಂದ ಗ್ರಾಮ ವಾಸ್ತವ್ಯ!

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಮಗ ಸಿದ್ದಾರ್ಥ ಸಿಂಗ್‌ರಿಂದ ಜನರ ಸಮಸ್ಯೆ ಆಲಿಕೆ
Last Updated 25 ಅಕ್ಟೋಬರ್ 2022, 12:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಕ್ಷೇತ್ರದಲ್ಲಿ ಅವರ ಮಗ ಸಿದ್ದಾರ್ಥ ಸಿಂಗ್‌ ಎಲ್ಲೆಡೆ ಓಡಾಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಸಮಸ್ಯೆ ಆಲಿಸುತ್ತಿದ್ದಾರೆ. ಕೆಲವೆಡೆ ತಕ್ಷಣಕ್ಕೆ ಪರಿಹಾರ ಒದಗಿಸುವ ಕೆಲಸವೂ ಮಾಡುತ್ತಿದ್ದಾರೆ.

ಆದರೆ, ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ನಡೆಸುತ್ತಿರುವ ಈ ಗ್ರಾಮ ವಾಸ್ತವ್ಯ ಮುಂದಿನ ರಾಜಕೀಯ ಲೆಕ್ಕಾಚಾರ ಇಟ್ಟುಕೊಂಡು ನಡೆಸುತ್ತಿರುವ ಕಸರತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇಷ್ಟೇ ಅಲ್ಲ, ಆನಂದ್‌ ಸಿಂಗ್‌ ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಅವರಿಗೆ ಆಡಳಿತಾತ್ಮಕ, ರಾಜಕೀಯ ನಿರ್ಣಯ ಕೈಗೊಳ್ಳುವ ಅಧಿಕಾರವಿದೆ. ಜನರ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬಹುದು. ಆದರೆ, ಯಾವುದೇ ಹುದ್ದೆಯಲ್ಲಿರದ ಸಿದ್ದಾರ್ಥ ಸಿಂಗ್‌ ಅವರಿಂದ ಇದು ಸಾಧ್ಯವೇ? ಚುನಾವಣೆಯ ಹೊಸ್ತಿಲಲ್ಲಿ ಜನರ ಮನಗೆಲ್ಲುವ ತಂತ್ರವೇ ಇದು ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದೆ.

ಇಷ್ಟೇ ಅಲ್ಲ, ಒಳ್ಳೆಯ ಉದ್ದೇಶದಿಂದ ಸಿದ್ದಾರ್ಥ ಸಿಂಗ್‌ ಎಲ್ಲೆಡೆ ಸಂಚರಿಸಿ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುತ್ತಿರಬಹುದು. ಆದರೆ, ಈ ಮೂಲಕ ಸ್ವತಃ ಅವರೇ ಅವರ ತಂದೆಯ ವೈಫಲ್ಯಗಳನ್ನು ಎತ್ತಿ ತೋರಿಸುವ ಕೆಲಸವೂ ಮಾಡುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ ಪಕ್ಷ ಮಾಡಿದೆ.

‘ಸಿದ್ದಾರ್ಥ ಸಿಂಗ್‌ ಗ್ರಾಮ ವಾಸ್ತವ್ಯಕ್ಕೆ ಯಾವುದೇ ಮಹತ್ವ ಇಲ್ಲ. ಯಾರದ್ದೋ ಮನೆಯಲ್ಲಿ ಮಲಗಿ, ಊಟ ಮಾಡಿ, ಕಬ್ಬು ಮಾಡಿದರೆ ಮತಗಳು ಬೀಳುವುದಿಲ್ಲ. ಅವರು ಯಾವುದೇ ಹುದ್ದೆಯಲ್ಲಿರದ ಕಾರಣ ಅದಕ್ಕೆ ಮಹತ್ವವೇ ಇಲ್ಲ. ಸಂಕಷ್ಟದಲ್ಲಿದ್ದವರನ್ನು ಕಂಡು ಕೆಲವೆಡೆ ನಗದು ಪರಿಹಾರ ಕೊಟ್ಟಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ವ್ಯವಸ್ಥೆ ಮಾಡಿದ್ದಾರೆ. ಇನ್ನು, ವಿಜಯನಗರ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ ಎಂದು ಅರ್ಥ. ಹಾಗಿದ್ದರೆ ನಾಲ್ಕು ಸಲ ಕ್ಷೇತ್ರದಿಂದ ಗೆದ್ದಿರುವ ಆನಂದ್‌ ಸಿಂಗ್‌ ಅವರಿಂದ ಜನರಿಗೆ ಕನಿಷ್ಠ ಕುಡಿಯುವ ನೀರು ಕೊಡಲು ಆಗಿಲ್ಲವೇ? ಇದು ಅವರ ವೈಫಲ್ಯವಲ್ಲವೇ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಆನಂದ್‌ ಸಿಂಗ್‌ ಅವರು ಮಗನ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸಿದ್ದಾರ್ಥ ಸಿಂಗ್‌ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಈಗಾಗಲೇ ಎಲ್ಲ ಇಲಾಖೆಗಳಲ್ಲಿ ಸಿಂಗ್‌ ಪರಿವಾರದವರ ಹಸ್ತಕ್ಷೇಪದಿಂದ ಜನ ಬೇಸತ್ತು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಗನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಅವರಿಗೆ ರಾಜಕೀಯವಾಗಿ ಬೆಳೆಸಲು ನಡೆಸುತ್ತಿರುವ ಕಸರತ್ತಿಗೆ ಜನ ಮೂರ್ಖರಾಗುವುದಿಲ್ಲ’ ಎಂದೂ ಹೇಳಿದೆ.

ಈ ಸಂಬಂಧ ಸಚಿವ ಆನಂದ್‌ ಸಿಂಗ್‌, ಸಿದ್ದಾರ್ಥ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

‘ಮೂರು ಸಲ ಗೆದ್ದರೂ ಟ್ಯಾಂಕರ್‌ ನೀರು ನಾಚಿಕೆಗೇಡು’:
‘ವಿಜಯನಗರ ಕ್ಷೇತ್ರದಿಂದ ಆನಂದ್‌ ಸಿಂಗ್‌ ನಾಲ್ಕು ಸಲ ಗೆದ್ದಿದ್ದರೂ ಕ್ಷೇತ್ರದ ಜನತೆಗೆ ಟ್ಯಾಂಕರ್‌ ಮೂಲಕ ನೀರು ಕೊಡುತ್ತಿರುವುದು ನಾಚಿಕೆಗೇಡಿನ ವಿಷಯ’ ಎಂದು ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಟೀಕಿಸಿದರು.
‘ಕುಡಿಯುವ ನೀರಿಗಾಗಿಯೇ ರಾಜ್ಯ, ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಆದರೆ, ಜನರಿಗೆ ಕನಿಷ್ಠ ನೀರಿನ ವ್ಯವಸ್ಥೆ ಮಾಡಿಲ್ಲ. ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಮೊನ್ನೆ ಬಿದ್ದ ಮಳೆಗೆ ಹೊಸಪೇಟೆ ಹೊಳೆಯಂತಾಗಿದ್ದು ಅದಕ್ಕೆ ಸಾಕ್ಷಿ. ನಾಲ್ಕು ಸಲ ಚುನಾವಣೆಯಲ್ಲಿ ಗೆದ್ದು ಜನರಿಗೆ ಮೂಲಭೂತ ಸೌಕರ್ಯ ಕೊಡಲಾಗಿಲ್ಲ ಎಂದರೆ ಏನರ್ಥ?’ ಎಂದು ಪ್ರಶ್ನಿಸಿದರು.

‘ನಾವು ಸಚಿವರಿಂದ ಹಣ ಪಡೆದಿಲ್ಲ’:
‘ಸಚಿವ ಆನಂದ್‌ ಸಿಂಗ್‌ ಅವರು ದೀಪಾವಳಿ ಕೊಡುಗೆಯ ರೂಪದಲ್ಲಿ ನಗರಸಭೆಯ ಸದಸ್ಯರಿಗೆ ₹1 ಲಕ್ಷ ನಗದು, ಒಂದು ಕೆ.ಜಿ ಬೆಳ್ಳಿ, ರೇಷ್ಮೆ ಉಡುಪು ಕೊಟ್ಟಿದ್ದಾರೆ. ಆದರೆ, ನಾವು ಅದನ್ನು ತಿರಸ್ಕರಿಸಿದ್ದೇವೆ. ಹಣ, ಬೆಳ್ಳಿ ಪಡೆದಿಲ್ಲ. ಸಿಹಿ ಅಷ್ಟೇ ಪಡೆದಿದ್ದೇವೆ’ ಎಂದು ನಗರಸಭೆಯ 6ನೇ ವಾರ್ಡ್‌ ಸದಸ್ಯ ಅಬ್ದುಲ್‌ ಖದೀರ್‌, 20ನೇ ವಾರ್ಡ್‌ ಸದಸ್ಯ ರಾಘವೇಂದ್ರ, 25ನೇ ವಾರ್ಡ್‌ ಸದಸ್ಯ ಕೆ. ಮಹೇಶ್‌ ತಿಳಿಸಿದ್ದಾರೆ.

‘ಎಲ್ಲ ನಗರಸಭೆ ಸದಸ್ಯರು ಉಡುಗೊರೆ ಪಡೆದಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದದ್ದು. ನಾವು ಯಾರಿಗೂ ಮಾರಾಟವಾಗುವವರು ಅಲ್ಲ. ನಮ್ಮ ವಾರ್ಡ್‌ ಸದಸ್ಯರಿಗೆ ಎಂದೂ ದ್ರೋಹ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT