ಕುರುಗೋಡು: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಾಲ್ಲೂಕಿನ ಗೆಣಿಕೆಹಾಳು ಗ್ರಾಮದ ರೈತರು ಜೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯುತ್ ಕೊರತೆಯಿಂದ ಭತ್ತನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ನಷ್ಟವಾದರೆ ಜೆಸ್ಕಾಂ ಅಧಿಕಾರಿಗಳೇ ಕಾರಣರಾಗುತ್ತೀರಿ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಕೊರತೆಯ ಪರಿಣಾಮ ಕಾಲುವೆಗೆ ನೀರು ಹರಿಸುವುದು ವಿಳಂಬವಾಗುತ್ತಿದೆ. ಕಾಲುವೆ ನೀರು ಬರುವ ಮೊದಲು ನಾವು ಭತ್ತ ನಾಟಿ ಮಾಡಿಕೊಳ್ಳಬೇಕು. ಇಲ್ಲವಾದರೆ ಭತ್ತದ ಪೈರಿನ ಬೆಲೆ ದುಪ್ಪಟ್ಟಾಗುವುದರ ಜತೆಗೆ, ಕಾರ್ಮಿಕರ ಕೊರತೆಯೂ ಎದುರಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿಗದಿಯಂತೆ ನಿತ್ಯ ಬೆಳಗಿನ ಜಾವ 3ರಿಂದ 10ರ ವರೆಗೆ ಒಟ್ಟು 7 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ದುರಸ್ತಿ ಕಾರಣ ವಿದ್ಯುತ್ ಸ್ಥಗಿತಗೊಂಡರೆ ಉಳಿದ ಅವಧಿಯಷ್ಟು ವಿದ್ಯುತ್ ಕಡ್ಡಾಯವಾಗಿ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಜೆಸ್ಕಾಂ ಎಇ ಜಯಶ್ರೀ, ಗೆಣಿಕೆಹಾಳು ಮತ್ತು ವದ್ದಟ್ಟಿ ಮಾರ್ಗದಲ್ಲಿ ಓವರ್ ಲೋಡ್ ಇರುವ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತರಾದ ಎಂ.ಶರಣ ಗೌಡ, ಎನ್.ಕರೆಪ್ಪ, ಗೋವಿಂದಪ್ಪ, ರವಿ, ಅಮೀರ್, ಎನ್.ಜಡೆಪ್ಪ, ಎಂ.ಶಾಂತಪ್ಪ, ರುದ್ರಪ್ಪ, ಎಚ್.ಎಂ.ಪಂಪಯ್ಯ, ಹನುಮಂತ, ಎರೆಪ್ಪ, ಅಂಗಡಿ ಶರಣಬಸವ, ಶಿವಪುತ್ರ, ಈರಣ್ಣ, ಪಕ್ಕೀರಪ್ಪ, ಪಂಪಾಪತಿ, ಜಿ.ನಾಗಪ್ಪ, ಶೇಷಪ್ಪ ಮತ್ತು ಎಂ.ಶಾಂತನ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.