ತೆಕ್ಕಲಕೋಟೆ: ಪಟ್ಟಣದ ಮೂಲಕ ಹಾದು ಹೋಗಲಿರುವ ಬಳ್ಳಾರಿ-ಲಿಂಗಸೂಗೂರು ನೂತನ ರೈಲ್ವೆ ಯೋಜನೆ ಕಾಮಗಾರಿ ಪ್ರಾರಂಭಿಸುವಂತೆ ಹಾಗೂ ಪಟ್ಟಣದಲ್ಲಿ ರೈಲ್ವೆ ಜಂಕ್ಷನ್ ನಿರ್ಮಾಣಕ್ಕೆ ಒತ್ತಾಯಿಸಿ ಸಾರ್ವಜನಿಕರು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥ ಎಚ್.ಕಾಡಸಿದ್ದ ಮಾತನಾಡಿ, ‘ರೈಲ್ವೆ ಯೋಜನೆಗೆ ನಿಗದಿತ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಆದ್ದರಿಂದ ಅನುದಾನ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು' ಎಂದು ಆಗ್ರಹಿಸಿದರು.
ನೂತನ ರೈಲ್ವೆ ಮಾರ್ಗವು ಬಳ್ಳಾರಿ ಕಂಟೋನ್‌ಮೆಂಟ್‌ನಿಂದ ಸಿರಿಗೇರಿ ಕ್ರಾಸ್, ತೆಕ್ಕಲಕೋಟೆ, ಸಿರುಗುಪ್ಪ, ಸಿಂಧನೂರು ಮಾರ್ಗವಾಗಿ ಲಿಂಗಸೂಗೂರಿಗೆ ಜೋಡಣೆಯಾಗಲಿದೆ. ಆದ್ದರಿಂದ ಈ ಯೋಜನೆ ಶೀಘ್ರವಾಗಿ ಜಾರಿಯಾಗುವಂತೆ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಅವರಿಗೆ ಒತ್ತಡ ಹಾಕಿ ಯೋಜನೆ ಶೀಘ್ರವಾಗಿ ಆರಂಭವಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಂಸದ ರಾಜಶೇಖರ ಹಿಟ್ನಾಳ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಮಸ್ಥರಾದ ಹೊನ್ನುರ್ ವಲಿ, ವೀರೇಂದ್ರಬಾಬು, ಶೇಕ್ಷಾವಲಿ, ಗಂಗಮ್ಮ, ಮುನಿಸ್ವಾಮಿ, ರಂಗನಾಥ, ಖಾದರ್‌ಸಾಬ್, ಬಸವರಾಜ ಹೊನ್ನೂರ ಸ್ವಾಮಿ, ಎ.ಮುತ್ತಯ್ಯ, ಎಂ.ಆಕ್ಟರ್, ರಾಜಣ್ಣ, ಪಂಪಾಪತಿ ಹಾಜರಿದ್ದರು.