ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಮರಗಳ ಕಡಿತಕ್ಕೆ ಸಾರ್ವಜನಿಕರ ವಿರೋಧ: ರಸ್ತೆ ವಿಸ್ತರಣೆ ಯೋಜನೆ ಕೈಬಿಡುವಂತೆ ಆಗ್ರಹ

Published 30 ಮೇ 2023, 14:06 IST
Last Updated 30 ಮೇ 2023, 14:06 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಹೊಸಪೇಟೆ ರಸ್ತೆಯಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯೊಂದಕ್ಕೆ ಅನುಕೂಲ ಮಾಡಿಕೊಡಲು ನಗರದ ಸಾಲು ಮರಗಳ ಮಾರಣ ಹೋಮ ನಡೆಸಲು ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಟಿ.ಬಿ ಸ್ಯಾನಿಟೋರಿಯಂನಿಂದ ಹೊಸಪೇಟೆ ರಸ್ತೆವರೆಗೆ ಸುಮಾರು 450 ಮರಗಳಿಗೆ  ಕೊಡಲಿ ಹಾಕಲು ಅರಣ್ಯ ಇಲಾಖೆ ಉದ್ದೇಶಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿತ್ತು.

ಕುವೆಂಪುನಗರದ ರಸ್ತೆಯ ಇಕ್ಕೆಲಗಳಲ್ಲೂ ಸಮೃದ್ಧವಾಗಿ ಬೆಳೆದಿರುವ ಮರಗಳ ಕಡಿತಲೆಗೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅರಣ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಮರಗಳ ಕಡಿತಲೆಗೆ ಸುಮಾರು ಆಕ್ಷೇಪಣೆಗಳು ಬಂದಿವೆ. ಇದರಲ್ಲಿ 35ರಿಂದ 40 ಜನ ಮರ ಕಡಿಯಬಾರದೆಂದು ಹೇಳಿದ್ದಾರೆ. ಜಿಲ್ಲಾಡಳಿತದ ಜತೆ ಸಮಾಲೋಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಮೂಲಗಳು ಹೇಳಿವೆ.

ಹಿಂದಿನ ಸರ್ಕಾರದಲ್ಲಿ ಟಿ.ಬಿ. ಸ್ಯಾನಿಟೋರಿಯಂನಿಂದ ವಿನಾಯಕನಗರ, ಅಲ್ಲೀಪುರ, ಹೊಸಪೇಟೆ ಬೈಪಾಸ್‌ವರೆಗೆ ರಸ್ತೆ ವಿಸ್ತರಣೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಟೆಂಡರ್‌ ಕರೆದಿತ್ತು. ಕೆಲವು ಪ್ರಭಾವಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಆರಂಭದಲ್ಲಿ ಅರಣ್ಯ ಇಲಾಖೆಯೂ ಮರಗಳ ಕಡಿತಲೆಗೆ ವಿರೋಧ ವ್ಯ‌ಕ್ತಪಡಿಸಿತ್ತು. ಆ ಬಳಿಕ ಒಲ್ಲದ ಮನಸ್ಸಿನಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ ಎಂದೂ ಮೂಲಗಳು ವಿವರಿಸಿವೆ.

‘ಬಿರು ಬಿಸಿಲಿನಿಂದ ಕಂಗೆಟ್ಟಿರುವ ಬಳ್ಳಾರಿ ನಗರದಲ್ಲಿ ನೆರಳು ಕೊಡಲು ಇರುವುದು ಕೆಲವೇ ಮರಗಳು. ಅವುಗಳಿಗೂ ಕೊಡಲಿ ಹಾಕಿದರೆ ಏನು ಗತಿ’ ಎಂಬುದು ಹಲವರ ಪ್ರಶ್ನೆ.

ವಿಶ್ವ ಪರಿಸರ ದಿನಾಚರಣೆ ವೇಳೆ ‘ಮನೆಗೊಂದು ಮರ, ಊರಿಗೊಂದು ವನ’ ಎಂದು ಅರಣ್ಯ ಇಲಾಖೆಯೇ ಪ್ರಚಾರ ಮಾಡಿ ಇದೀಗ ಬೆಳೆದು ನಿಂತಿರುವ ಮರಗಳನ್ನ ಕಡಿಯುವುದಕ್ಕೆ ಮುಂದಾಗಿರುವುದು ವಿಪರ್ಯಾಸ ಎಂಬ ಟೀಕೆಗಳು ವ್ಯಕ್ತವಾಗಿವೆ.

ಮರಗಳ ಕಡಿತಲೆ ಕುರಿತು ಈಚೆಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ, ‘ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಬಳಿಕ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸಲಾಗುವುದು’ ಎಂದಿದ್ದರು.

ಈಗ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT