ಬಳ್ಳಾರಿ: ಸಾರಿಗೆ ಸಂಸ್ಥೆ ಬಸ್ ಹರಿದು ಮೂವರ ಸಾವು

ಬಳ್ಳಾರಿ: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹರಿದು ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಇಲ್ಲಿಗೆ ಸಮೀಪದ ಹಲಕುಂದಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಮುನ್ಸಿಪಲ್ ಪಿ.ಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಕನಕರಾಜು (19), ವಾಡ್ಲಾ ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿ ಶಂಕರ್ (18) ಮತ್ತು ಪದವಿ ಓದುತ್ತಿದ್ದ ಹೊನ್ನೂರ (22) ಅಪಘಾತದಲ್ಲಿ ಮೃತಪಟ್ಟ ನತದೃಷ್ಟರು.
ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ನಿವಾಸಿ ಕುಮಾರಪ್ಪ ಅವರ ಪುತ್ರ ಕನಕರಾಜು, ಆಂಧ್ರ ಪ್ರದೇಶ ಅನಂತಪುರ ಜಿಲ್ಲೆಯ ಹಿರೇಹಾಳ್ ಮಂಡಳದ ಮುರಡಿ ಗ್ರಾಮದ ನಾಗರಾಜ್ ಅವರ ಮಗ ಶಂಕರ್, ಸಂಡೂರು ತಾಲ್ಲೂಕು ಗೊಲ್ಲಲಿಂಗಮ್ಮ ನಾಗೇನಹಳ್ಳಿಯ ಹುಲಿಯಪ್ಪ ಅವರ ಪುತ್ರ ಹೊನ್ನೂರ ಕೇಟರಿಂಗ್ ಕೆಲಸಕ್ಕೆ ಹೋಗಿ ತಡರಾತ್ರಿ 1.30ರ ಸುಮಾರಿಗೆ ಬಳ್ಳಾರಿಗೆ ವಾಪಸ್ ಬರುವಾಗ ಸಾರಿಗೆ ಸಂಸ್ಥೆ ಬಸ್ ಹರಿಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರ್ ಹಾಗೂ ಹೊನ್ನೂರ ಸ್ವಾಮಿ ಬಳ್ಳಾರಿಯ ಎಸ್‌ಸಿ, ಎಸ್‌ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಓದುತ್ತಿದ್ದರು. ಬೆಂಗಳೂರಿನಿಂದ ಯಡ್ರಾಮಿಗೆ ಹೊರಟ್ಟಿದ್ದ ಜೇವರ್ಗಿ ಡಿಪೋಗೆ ಸೇರಿದ ಬಸ್ ವಿದ್ಯಾರ್ಥಿಗಳ ಮೇಲೆ ಹರಿಯಿತು ಎಂದು ಪೊಲೀಸರು ಹೇಳಿದ್ದಾರೆ.
ಪ್ರದೀಪ್ ಕುಮಾರ್ ಮತ್ತು ಬಿ.ಎಂ. ಸಾಸನೂರ್ ಬಸ್ ಚಾಲಕರಾಗಿದ್ದು, ಅಹಮದ್ ಬಸ್ ಕಂಡಕ್ಟರ್ ಆಗಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.