ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಶಿಕ್ಷಕ, ವಿದ್ಯಾರ್ಥಿ, ಪಾಲಕರ ಪರದಾಟ

ತಾಲ್ಲೂಕು ಕೇಂದ್ರವಾಗಿ ಆರು ವರ್ಷ: ಆರಂಭವಾಗದ ಬಿಇಒ ಕಚೇರಿ
Published 28 ಮೇ 2023, 6:51 IST
Last Updated 28 ಮೇ 2023, 6:51 IST
ಅಕ್ಷರ ಗಾತ್ರ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ

ಕಂಪ್ಲಿ: ಕಂಪ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಆರು ವರ್ಷ ಗತಿಸಿದರೂ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಆರಂಭವಾಗದೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಪರದಾಟ ಮುಂದುವರಿದಿದೆ.

ತಾಲ್ಲೂಕಿನಲ್ಲಿ ಸುಮಾರು 50 ಸರ್ಕಾರಿ ಪ್ರಾಥಮಿಕ, 10 ಸರ್ಕಾರಿ ಪ್ರೌಢ, 5 ಅನುದಾನಿತ ಪ್ರಾಥಮಿಕ, 2 ಅನುದಾನಿತ ಪ್ರೌಢ, 29 ಅನುದಾನ ರಹಿತ ಪ್ರಾಥಮಿಕ ಮತ್ತು 13 ಅನುದಾನ ರಹಿತ ಪ್ರೌಢಶಾಲೆಗಳಿದ್ದು, ಐದು ಕ್ಲಸ್ಟರ್ ಒಳಗೊಂಡಿದೆ.
ತಾಲ್ಲೂಕಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಬಳಿಕ ಗ್ರಾಮೀಣ ವ್ಯಾಸಂಗ ದೃಢೀಕರಣ ಪ್ರಮಾಣ ಪತ್ರಗಳಿಗೆ ಮತ್ತು ಕಲ್ಯಾಣ ಕರ್ನಾಟಕ 371(ಜೆ) ಪ್ರಮಾಣ ಪತ್ರದ ಮೇಲು ರುಜುಗಾಗಿ 31 ಕಿ.ಮೀ. ದೂರದ ಹೊಸಪೇಟೆಯ ಬಿಇಒ ಕಚೇರಿ ತೆರಳಬೇಕಾಗಿದೆ. ಅದರಿಂದ ಸಮಯ, ಹಣ ವ್ಯರ್ಥ ಎಂದು ವಿದ್ಯಾರ್ಥಿಗಳು, ಪಾಲಕರು ಅಪಾದಿಸುತ್ತಾರೆ.

ತಾಲ್ಲೂಕಿನ ಶಿಕ್ಷಕರು ವೇತನ ಪ್ರಮಾಣ ಪತ್ರ, ಇಂಕ್ರಿಮೆಂಟ್(ಮುಂಬಡ್ತಿ), ಕೆಜಿಐಡಿ(ಜಿಪಿಎಫ್)ನಿಂದ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ನವೀಕರಿಸಲು, ವಾರ್ಷಿಕ ಶಾಲಾ ತಪಾಸಣೆ ವರದಿ, ಇತರೆ ದಾಖಲೆ, ಲೆಕ್ಕ ಪತ್ರ ಪರಿಶೀಲನೆ ಸೇರಿದಂತೆ ಇಲಾಖೆಯ ವಿವಿಧ ತರಬೇತಿಗಳಿಗೆ ದೂರದ ಬಿಇಒ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ. ಬಿಇಒ ಕಚೇರಿ ಆರಂಭವಾಗದ ಹೊರತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿಯೂ ಆರಂಭವಾಗುವಂತಿಲ್ಲ. ಈ ಕಾರಣದಿಂದ ಸಮೂಹ ಸಂಪನ್ಮೂಲ ವ್ಯಕ್ತಿಗಳ ವರದಿ, ದಾಖಲೆಗಳ ಸಲ್ಲಿಕೆ, ತರಬೇತಿಗಳಿಗೆ ತುಂಬಾ ತೊಂದರೆ ಸಾಮಾನ್ಯವಾಗಿದೆ.

ತಾಲ್ಲೂಕಿನಲ್ಲಿ ದೇವಸಮುದ್ರ, ಮೆಟ್ರಿ, ಸುಗ್ಗೇನಹಳ್ಳಿ, ಪಟ್ಟಣದ 8ನೇ ವಾರ್ಡ್, ಎನ್.ಎನ್ ಪೇಟೆ ಹಾಗೂ ಎಮ್ಮಿಗನೂರು ಗ್ರಾಮದಲ್ಲಿ ಕ್ಲಸ್ಟರ್ ಗಳಿವೆ. ಆದರೆ, ಎಮ್ಮಿಗನೂರು ಕ್ಲಸ್ಟರ್ ಭೌಗೋಳಿಕವಾಗಿ ಕಂಪ್ಲಿ ತಾಲ್ಲೂಕಿಗೆ ಸೇರಿದೆ. ಆದರೂ ಈ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಶಿಕ್ಷಕರ ಸಂಘದ ಚುನಾವಣೆ ನಡೆದಾಗ ಕಂಪ್ಲಿ ತಾಲ್ಲೂಕಿನಲ್ಲಿ ಮತದಾನದ ಮಾಡುತ್ತಾರೆ. ಆದರೆ, ಶೈಕ್ಷಣಿಕ ವಿಚಾರದಲ್ಲಿ ಎಮ್ಮಿಗನೂರು ಕ್ಲಸ್ಟರ್ ಬಳ್ಳಾರಿ ಪಶ್ಚಿಮ(ಕುರುಗೋಡು‌ ಬಿಇಒ) ವ್ಯಾಪ್ತಿಗೆ ಸೇರುತ್ತದೆ. ಈ ಕಾರಣದಿಂದ ತಾಲ್ಲೂಕಿನ ಪೂರ್ಣ ಶೈಕ್ಷಣಿಕ ವರದಿ ಹಾಗೂ ಪ್ರಗತಿ ಕುರಿತಂತೆ ಹಲವಾರು ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ.

ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಆರಂಭಿಸುವಂತೆ ಸ್ಥಳೀಯ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ತಹಶೀಲ್ದಾರ್ ಮೂಲಕ ಈ ಹಿಂದಿನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಗತಿ ಕಂಡಿಲ್ಲ. 2021ರ ಆ.12ರಂದು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಬೆಂಗಳೂರು ಜಂಟಿ ನಿರ್ದೇಶಕರು(ಆಡಳಿತ) ಹೆಚ್ಚುವರಿ ಹುದ್ದೆಗಳನ್ನು ಸ್ಥಳಾಂತರಿಸಿ ನೂತನ ತಾಲ್ಲೂಕಿನಲ್ಲಿ ಬಿಇಒ ಕಚೇರಿ ಆರಂಭಿಸುವಂತೆ ಹೊರಡಿಸಿದ ಆದೇಶವೂ ಜಾರಿಯಾಗಿಲ್ಲ. ಈ ಕಾರಣದಿಂದ ಇಂದಿಗೂ ವಿಜಯನಗರ ಜಿಲ್ಲೆ ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕಂಪ್ಲಿ ತಾಲ್ಲೂಕು ಅವಲಂಬಿಸಿದೆ.

ಸ್ಥಳೀಯ ಷಾಮಿಯಾಚಂದ್ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿರುವ ನೂತನ ಕೊಠಡಿಯೊಂದರಲ್ಲಿ ಬಿಇಒ ಕಚೇರಿ ಆರಂಭಿಸಲು ನಾಮಫಲಕ ಬರೆಯಿಸಿ ಪೂರ್ವ ಸಿದ್ಧತೆ ತಯಾರಿ ನಡೆಸಲಾಗಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳು ಎದುರಾಗಿದ್ದರಿಂದ ಈ ಪ್ರಕ್ರಿಯೆ ಸ್ಥಗಿತವಾಯಿತು.

ಕಂಪ್ಲಿ ಹೊಸ ತಾಲ್ಲೂಕಿನಲ್ಲಿ ಬಿಇಒ ಕಚೇರಿ ಆರಂಭ ಕುರಿತಂತೆ ಇಲಾಖೆ ಮೇಲಧಿಕಾರಿಗಳು ಶುಕ್ರವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಸ್ತಾಪಿಸಿದ್ದೇನೆ. ಜೊತೆಗೆ ಮೂಲ ಸೌಕರ್ಯಗಳ ಕುರಿತು ಮನವರಿಕೆ ಮಾಡಿದ್ದೇನೆ. ಸದ್ಯ ಈ ವಿಷಯ ಸರ್ಕಾರದ ಹಂತದಲ್ಲಿದ್ದು, ನಿರೀಕ್ಷಿಸಬೇಕಿದೆ ಎಂದು ಬಳ್ಳಾರಿ ಡಿಡಿಪಿಐ ಅಂದಾನಪ್ಪ ವಡಿಗೇರಿ ಹೇಳಿದರು.

ವಿಜಯನಗರ ಜಿಲ್ಲೆ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಅವಲಂಬನೆ -

ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಸಂಬಂಧಿಸಿದ ಮಂತ್ರಿಗಳನ್ನು ಭೇಟಿ ಮಾಡಿ ವಿಶೇಷವಾಗಿ ಬಿಇಒ ಕಚೇರಿ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳ ಆರಂಭಕ್ಕೆ ಪ್ರಯತ್ನಿಸುತ್ತೇನೆ.

- ಜೆ.ಎನ್. ಗಣೇಶ್ ಶಾಸಕರು ಕಂಪ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT