ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಯ ಎ.ಮಾನಯ್ಯ, ‘ರಾಹುಲ್ ಗಾಂಧಿಯವರನ್ನು ಮೀಸಲಾತಿ ವಿರೋಧಿ ಎಂದು ಬಿಜೆಪಿ, ಜೆಡಿಎಸ್ ಬಿಂಬಿಸುತ್ತಿರುವುದು ಸರಿಯಲ್ಲ‘ ಎಂದರು.
‘ಶಾಸಕ ಮುನಿರತ್ನ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ್ದಾರೆ. ಅತ್ಯಾಚಾರ ಎಸಗಿರುವ ಆರೋಪಗಳಿವೆ. ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಒಂದು ದೇಶ ಒಂದು ಚುನಾವಣೆ ಎಂಬುದು ಕೇಂದ್ರ ಸರ್ಕಾರದ ಗುಪ್ತ ಅಜೆಂಡಾದ ಒಂದು ಭಾಗ. ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ಮಾರಕ. ಇದನ್ನು ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ. ಇದನ್ನು ವಿರೋಧಿಸಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ’ ಎಂದರು.
ಜಿಲ್ಲಾ ಸಂಚಾಲಕ ಎಚ್. ಬಿ. ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಕೆ. ದೇವದಾಸು, ಆಂಜನೇಯ ಕೊಳಗಲ್ಲು, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಮಲ್ಲಯ್ಯ, ಬಿ ರಮೇಶ, ಐ ಎಂ ಎಗ್ರಿಸ್ವಾಮಿ, ಮುಖಂಡರಾದ ಪಂಪಾತಿ ಕುಡತಿನಿ, ನಾಗೇಂದ್ರ ಸೇರಿದಂತೆ ಹಲವರು ಇದ್ದರು.