ಬಳ್ಳಾರಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಆರೋಪಿ, ನಟ ದರ್ಶನ್ ಅವರನ್ನು ಸೋಮವಾರ ಬಳ್ಳಾರಿ ಕಾರಾಗೃಹದಿಂದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ (ವಿ.ಸಿ) ಮೂಲಕ ಹಾಜರುಪಡಿಸಲಾಯಿತು. ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 9ರಂದು ಕೊನೆಗೊಂಡಿತ್ತು.
ದರ್ಶನ್ ಅವರಿಗೆ ಜೈಲಿನಲ್ಲಿ ಈವರೆಗೆ ಟಿವಿ ವ್ಯವಸ್ಥೆ ಆಗಿಲ್ಲ. ಹಳೇ ಟಿವಿಯನ್ನೇ ದುರಸ್ತಿಪಡಿಸಿ, ಕೊಡಲಾಗಿತ್ತು. ಆದರೆ, ಅದರ ಧ್ವನಿವರ್ಧಕದಲ್ಲಿ ದೋಷವಿದ್ದ ಕಾರಣ ಮತ್ತೆ ದುರಸ್ತಿಗೆ ಕಳುಹಿಸಲಾಯಿತು ಎಂದು ಹೇಳಲಾಗಿದೆ.
ದರ್ಶನ್ ಭೇಟಿಗೆ ಸೋಮವಾರ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದ ಶಿಗ್ಲಿ ಬಸ್ಯ ಎಂಬುವರಿಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಬಳ್ಳಾರಿ ಕಾರಾಗೃಹದಲ್ಲಿ 20 ವರ್ಷ ಸೆರೆವಾಸದಲ್ಲಿದ್ದ ಶಿಗ್ಲಿ ಬಸ್ಯ, ತಮ್ಮ ಪ್ರಕರಣಗಳಲ್ಲಿ ತಾವೇ ವಾದ ಮಾಡುತ್ತಿದ್ದರು ಎನ್ನಲಾಗಿದೆ.
‘ದರ್ಶನ್ ಚಾರ್ಜ್ ಶೀಟ್ ಅಧ್ಯಯನ ಮಾಡುತ್ತೇನೆ. ಪೊಲೀಸರು ಯಾವ ರೀತಿ ತನಿಖೆ ನಡೆಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ದರ್ಶನ್ ನಿರಪರಾಧಿ. ನಾನು ಅವರ ಪರ ಖಂಡಿತ ಹೋರಾಟ ನಡೆಸುವೆ. ಬಳ್ಳಾರಿ ಕೇಂದ್ರ ಕಾರಾಗೃಹ ದರ್ಶನ್‌ಗೆ ಸುರಕ್ಷಿತವಲ್ಲ’ ಎಂದು ಶಿಗ್ಲಿ ಬಸ್ಯ ಸುದ್ದಿಗಾರರಿಗೆ ತಿಳಿಸಿದರು.