ಬಳ್ಳಾರಿ/ಬೆಳಗಾವಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಗುರುವಾರ ಬೆಳಿಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಸುಕಿನ 4.30ಕ್ಕೆ ಅವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಯಿತು. ಚಿಕ್ಕಬಳ್ಳಾಪುರ, ಅನಂತಪುರ ಮಾರ್ಗದ ಮೂಲಕ ಸಾಗಿ, ಸರಿಯಾಗಿ 9.55ಕ್ಕೆ ಪೊಲೀಸರು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತಂದರು. ಮಾರ್ಗದಲ್ಲಿ ಅಲ್ಲಲ್ಲಿ ಅಭಿಮಾನಿಗಳು ದರ್ಶನ್ ಪರ ಜೈಘೋಷ ಹಾಕಿದರು.
ಕಿಟಕಿಗಳನ್ನು ಪರದೆಗಳಿಂದ ಮುಚ್ಚಲಾಗಿದ್ದ ಟೆಂಪೊ ಟ್ರಾವೆಲರ್‌ನಲ್ಲಿ, ಬಿಗಿ ಭದ್ರತೆಯೊಂದಿಗೆ ಜೈಲಿಗೆ ಕರೆತರಲಾಯಿತು. ಆರೋಗ್ಯ ತಪಾಸಣೆಗೆ ಒಳಪಡಿಸಿ, ಅವರು ಆರೋಗ್ಯವಾಗಿದ್ದಾರೆ ಎಂಬುದು ಖಾತ್ರಿಯಾದ ಬಳಿಕ ಕಾನೂನು ಪ್ರಕ್ರಿಯೆ ನಡೆದವು. ನಂತರ ವಿಶೇಷ ಭದ್ರತಾ ಕೊಠಡಿಯಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಯಿತು.
‘ಜೈಲಿನಲ್ಲಿ ದರ್ಶನ್‌ಗೆ ಒಂದು ತಟ್ಟೆ, ಲೋಟ, ಚೊಂಬು, ನೆಲಹಾಸು ಮತ್ತು ಹೊದಿಕೆ ಹೊರತುಪಡಿಸಿದರೆ ಬೇರೇನನ್ನೂ ನೀಡಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಜೈಲಿನಲ್ಲಿರುವ ಕೈದಿಗಳನ್ನು ನೋಡಲು ಅವರ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆಹಾರ ನೀಡಲು ನಿರಾಕರಿಸಲಾಗಿತ್ತು.
ಜೈಲಿನಲ್ಲಿ ಬೆಳಿಗ್ಗೆ ನೀಡಲಾದ ಉಪಾಹಾರವನ್ನು ದರ್ಶನ್ ನಿರಾಕರಿಸಿದರು ಎಂದು ಹೇಳಲಾಗಿದೆ. ಕೊಠಡಿಯಲ್ಲಿ ಕೆಲಹೊತ್ತು ಮಲಗಿದ್ದ ಅವರು ಬಳಿಕ, ಎದ್ದು ಕುಳಿತು ಏನನ್ನೋ ಯೋಚನೆ ಮಾಡುತ್ತಿರುವಂತೆ ಕಂಡರು ಎಂದು ಮೂಲಗಳು ತಿಳಿಸಿದವು.
‘ದರ್ಶನ್ ಧರಿಸಿದ್ದು ಕೂಲಿಂಗ್ ಅಲ್ಲ ಪವರ್ ಗ್ಲಾಸ್’
‘ಬಳ್ಳಾರಿ ಕಾರಾಗೃಹ ಪ್ರವೇಶಿಸುವ ಸಂದರ್ಭದಲ್ಲಿ ದರ್ಶನ್ ದೃಷ್ಟಿದೋಷಕ್ಕೆ ಸಂಬಂಧಿಸಿದಂತೆ ಪವರ್ ಗ್ಲಾಸ್ ಧರಿಸಿದ್ದರೇ ಹೊರತು ಕೂಲಿಂಗ್ ಗ್ಲಾಸ್ ಅಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ಬಳಸಲು ಕೈದಿಗೆ ಅಥವಾ ವಿಚಾರಣಾಧೀನ ಕೈದಿಗೆ ಅವಕಾಶವವಿದೆ. ಅವರ ಕೈಗಳಿಗೆ ಕೋಳವನ್ನು ಹಾಕಿರಲಿಲ್ಲ. ಅದು ಅವರ ಧರಿಸಿದ್ದ ಬೆಳ್ಳಿಯ ಕಡಗ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಅವರು, ‘ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ಕಲ್ಪಿಸಿದ ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪತ್ರವನ್ನು ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಪತ್ರ ಬರೆದಿದ್ದರು.
ವಿಚಾರಣಾಧೀನ ಕೈದಿಗಳಿಗೆ ಸಮವಸ್ತ್ರ ಇರಲ್ಲ:
ಕೈದಿಗಳ ಪರಿಕರಗಳನ್ನು ಕಾರಾಗೃಹದ ಪ್ರವೇಶದ್ವಾರದಲ್ಲೇ ತೆಗೆಸಿ, ಕೈದಿ ನಿರ್ಗಮಿಸುವ ವೇಳೆ ಮರಳಿಸಲಾಗುತ್ತದೆ. ಅದರಂತೆ, ದರ್ಶನ್ ಕೊರಳಲ್ಲಿದ್ದ ಸರ ಮತ್ತು ಕೈಯಲ್ಲಿದ್ದ ಕಡಗವನ್ನು ತೆಗೆಸಲಾಯಿತು.
‘ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ಮಾತ್ರ ಸಮವಸ್ತ್ರ ನೀಡಲಾಗುತ್ತದೆ. ವಿಚಾರಣಾಧೀನ ಕೈದಿಗಳು ಅವರ ಇಷ್ಟದ ಉಡುಗೆ ತೊಡಬಹುದು. ಆರಂಭದ ಒಂದು ವಾರ ಅವರ ಸಂಬಂಧಿಗಳಿಗೆ ನಿತ್ಯ ನೋಡಲು ಅವಕಾಶ ಇರುತ್ತದೆ. ದರ್ಶನ್ ಒಪ್ಪಿದರೆ ವಾರಕ್ಕೊಮ್ಮೆ ಅವರ ಸಂಬಂಧಿಗಳು, ಅವರ ಆಪ್ತರು ಭೇಟಿ ನೀಡಬಹುದು’ ಎಂದು ಶೋಭಾರಾಣಿ ವಿ.ಜೆ ತಿಳಿಸಿದರು.
ಧನರಾಜ್ ಪ್ರದೂಶ್ ಕೂಡ ಕಾರಾಗೃಹಕ್ಕೆ
ಧಾರವಾಡ/ಬೆಳಗಾವಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಧನರಾಜ್‌ಗೆ ಗುರುವಾರ ಮಧ್ಯಾಹ್ನ 12.45ಕ್ಕೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆತಂದರು. ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೂಶ್‌ಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ ಪೊಲೀಸರು ಕರೆ ತಂದರು. ಇಬ್ಬರ ಬಳಿಯಿದ್ದ ಚೀಲ ಪರಿಕರಗಳನ್ನು ಪರಿಶೀಲಿಸಿದರು. ಔಷಧಿ ಹೊರತುಪಡಿಸಿ ಉಳಿದ ಸಾಮಗ್ರಿಗಳನ್ನು ಒಯ್ಯಲು ಅವಕಾಶ ನೀಡಲಿಲ್ಲ.
ದರ್ಶನ್ ನಿಗಾವಣೆಗೆ ಜ್ಞಾಪನಾ ಪತ್ರ
ಬೆಳಗಾವಿ: ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರವಲಯ ಡಿಐಜಿ ಟಿ.ಪಿ.ಶೇಷ ಅವರು ಜೈಲಿನ ಅಧೀಕ್ಷಕರಿಗೆ ಜ್ಞಾಪನಾ ಪತ್ರ ಬರೆದಿದ್ದಾರೆ. ‘ದರ್ಶನ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಆ ಕೊಠಡಿಗೆ 24x7 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ನಿತ್ಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ‘ದರ್ಶನ್ ಇರುವ ಸೆಲ್‌ನ ಕರ್ತವ್ಯಕ್ಕೆ ಪ್ರತ್ಯೇಕವಾಗಿ ಒಬ್ಬ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಿ ನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಮತ್ತು ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮುನ್ನ ಪ್ರತಿನಿತ್ಯ ದರ್ಶನ ಸೆಲ್ ತಪಾಸಣೆ ಮಾಡಬೇಕು. ಸೆಲ್‌ಗೆ ನಿಯೋಜಿಸುವ ಸಿಬ್ಬಂದಿ ‘ಬಾಡಿವಾರ್ನ್’ ಕ್ಯಾಮೆರಾ ಧರಿಸಬೇಕು’ ಎಂದೂ ತಿಳಿಸಿದ್ದಾರೆ. ‘ದರ್ಶನ್ ಭೇಟಿಗೆ ಅವರ ಪತ್ನಿ ರಕ್ತಸಂಬಂಧಿ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಅವಕಾಶ ನೀಡಬೇಕು. ಚಿತ್ರರಂಗದ ಕಲಾವಿದರು ಅಭಿಮಾನಿಗಳು ರಾಜಕೀಯ ನಾಯಕರ ಭೇಟಿಗೆ ಅವಕಾಶ ನೀಡಬಾರದು. ಸಾಮಾನ್ಯ ಬಂದಿಯಂತೆಯೇ ಪರಿಗಣಿಸಿ ಸೌಲಭ್ಯ ನೀಡಬೇಕು. ಬೇರೆ ಕೈದಿಗಳ ಜೊತೆಗೆ ದರ್ಶನ್ ಬೆರೆಯವಂತಿಲ್ಲ. ಇದರ ಮೇಲೆ ನಿಗಾವಹಿಸಲು ಅಧಿಕಾರಿಗಳು ‘ದಿಢೀರ್ ಭೇಟಿ’ (ಸರ್ಪೈಸ್ ವಿಸಿಟ್)' ಮಾಡಬೇಕು. ಕಾರಾಗೃಹ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು’ ಎಂದೂ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.