ಸಿರುಗುಪ್ಪ: ಸಿರುಗುಪ್ಪ ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಹಂದ್ಯಾಳ್ ಗೋಪಾಲ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಐದು ವರ್ಷಗಳಿಂದ ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ. ಹೊಸ ಶಿಕ್ಷಣ ಸಂಸ್ಥೆಗಳ ನಿಯಮವನ್ನು ಯಥಾವತ್ತಾಗಿ ಹಳೇ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮುಖಾಂತರ ಕಿರುಕುಳ ನೀಡುತ್ತಿರುವುದು ದುರಂತ. ಉಚ್ಚನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ,ದೆ’ ಎಂದು ಆರೋಪಿಸಿದರು.
ನಮ್ಮ ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶಾಲಾ ಕಾಲೇಜುಗಳು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ‘ಕರಾಳ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಸರ್ಕಾರವು ತಾಲ್ಲೂಕಿನ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮತ್ತು ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸುವ ತನಕ ಸ್ವಾತಂತ್ರ ದಿನಾಚರಣೆ ಅಥವಾ ಇನ್ನಿತರೆ ಸರಕಾರಿ ಕಾರ್ಯಕ್ರಮಗಳಿಗೆ ಜಿಲ್ಲೆಯ ಖಾಸಗಿ ಅನುದಾನ ರಹಿತ ಶಾಲೆಗಳು ಭಾಗವಹಿಸುವುದಿಲ್ಲ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಅವಿನಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಲಿಂಗನಗೌಡ, ಸಹ ಕಾರ್ಯದರ್ಶಿ ವೀರೇಂದ್ರ ಸಾಹುಕಾರ, ಖಜಾಂಚಿ ಚಾಗಿ ಸುಬ್ಬಯ್ಯಶೆಟ್ಟಿ, ನಿರ್ದೇಶಕರಾದ ಮಧುಸೂದನ ಶೆಟ್ಟಿ, ರಂಗಮ್ಮ ಬಿ, ವಿವೇಕಾನಂದ ಇದ್ದರು.