ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕಾಸು ಕೊಟ್ಟರೂ ಕೊಡ ನೀರಿಲ್ಲ...

ಬಳ್ಳಾರಿ ತಾಲ್ಲೂಕಿನ ಹಳ್ಳಿಗಳಲ್ಲಿ ನೀರಿಗಾಗಿ ಮುಂದುವರಿದ ಹಾಹಾಕಾರ!
Published 27 ಮೇ 2023, 23:36 IST
Last Updated 27 ಮೇ 2023, 23:36 IST
ಅಕ್ಷರ ಗಾತ್ರ

ಹೊನಕೆರೆ ನಂಜುಂಡೇಗೌಡ

ಬಳ್ಳಾರಿ: ಬೆಳಿಗ್ಗೆ ಎಂಟು ಗಂಟೆ. ಆ ಬಾಲಕಿ ಖಾಲಿ ಕೊಡಗಳನ್ನು ಸೊಂಟ ಮತ್ತು ಬೆನ್ನ ಮೇಲಿಟ್ಟುಕೊಂಡು ಓಡುತ್ತಿದ್ದಳು. ವಯಸ್ಸು 11 ವರ್ಷ ಇರಬಹುದು. ರಸ್ತೆ ಬದಿಯ ಚರಂಡಿಯಲ್ಲಿ ತಳ ಮಟ್ಟದಲ್ಲಿ ಹಾಕಿದ್ದ ನಳವೊಂದರ ಬಳಿ ನೀರಿಗಾಗಿ ನಿಂತಿದ್ದವಳು ಒಮ್ಮೆಲೇ ಕೊಡಗಳನ್ನು ಎತ್ತಿಕೊಂಡು ಓಡಿದಳು. ಏಕೆ ಹೀಗೆ ಓಡುತ್ತಿದ್ದಾಳೆಂದು ನೋಡಿದರೆ ಎದುರಿಗೆ ನೀರು ತುಂಬಿದ್ದ ಟ್ಯಾಂಕರ್‌ ಬರುತಿತ್ತು...

ಶನಿವಾರ ಬೆಳಿಗ್ಗೆ ಬಳ್ಳಾರಿ ತಾಲ್ಲೂಕು ಶಂಕರಬಂಡೆಯಲ್ಲಿ ಕಂಡುಬಂದ ದೃಶ್ಯವಿದು. ಕುಡಿಯುವ ನೀರು ಹೊತ್ತು ಬರುತ್ತಿದ್ದ ಟ್ಯಾಂಕರ್‌ನಿಂದ ಕೊಡಗಳಿಗೆ ನೀರು ತುಂಬಿಸಿಕೊಳ್ಳಲು ಓಡುತ್ತಿದ್ದಳು ಬಾಲಕಿ. ಬಳ್ಳಾರಿ ನಗರದಿಂದ ರೂಪನಗುಡಿ ರಸ್ತೆಯಲ್ಲಿ ಬೆಳಿಗ್ಗೆ ಹೊರಟರೆ ಕುಡಿಯುವ ನೀರಿಗಾಗಿ ಜನ ಪಡಿಪಾಟಲು ಬೀಳುವುದು ಕಾಣುತ್ತದೆ.

ತಿರುಮಲನಗರ ಕ್ಯಾಂಪ್‌, ಧನಲಕ್ಷ್ಮೀ ಕ್ಯಾಂಪ್‌, ವಿಘ್ನೇಶ್ವರ ನಗರ ಕ್ಯಾಂಪ್, ಮಾರಮ್ಮ ಕ್ಯಾಂಪ್‌ ಹಾಗೂ ಶಂಕರ್‌ ಬಂಡೆ ಜನ ಪ್ರತಿ ಕೊಡ ನೀರಿಗಾಗಿ ‘ಹೋರಾಟ’ ಮಾಡುತ್ತಿದ್ದಾರೆ. ಖಾಲಿ ಕೊಡಗಳನ್ನು ಬೈಕ್‌ಗಳಿಗೆ ಕಟ್ಟಿಕೊಂಡು ಟ್ಯಾಂಕರ್‌ ಎದುರುಗೊಳ್ಳಲು ಐದಾರು ಕಿ.ಮೀ ಕ್ರಮಿಸುತ್ತಾರೆ. ಮಹಿಳೆಯರು, ಮಕ್ಕಳು ಮತ್ತು ದೂರ ಹೋಗಲಾಗದ ವೃದ್ಧರು ರಸ್ತೆ ಬದಿಯಲ್ಲಿ ನಿಂತು ಟ್ಯಾಂಕರ್ ಬರುವ ಕಡೆಗೆ ದೃಷ್ಟಿ ಹಾಯಿಸುತ್ತಾರೆ. ಪ್ರತಿ ದಿನ ಬೆಳಿಗ್ಗೆ ಐದು ಗಂಟೆಯಿಂದ ಜನರಿಗೆ ಇದು ತಪ್ಪದ ಪಾಡು...

ಶಂಕರ ಬಂಡೆಯ ಲಿಂಗಾರೆಡ್ಡಿ, ಬೈಕ್‌ಗೆ ಕೊಡಗಳನ್ನು ಕಟ್ಟಿ  ಟ್ಯಾಂಕರ್‌ ಹುಡುಕಿಕೊಂಡು ಆರು ಕಿ.ಮೀ. ದೂರದ ಕಮ್ಮರ್ಚೇಡ್‌ ಬಳಿ ಬಂದಿದ್ದರು. ರೂಪನಗುಡಿಯಿಂದ ನೀರಿನ ಟ್ಯಾಂಕರ್ ಬರುವುದು ಕೊಂಚ ತಡವಾದ್ದರಿಂದ ಅವರೇ ಬಂದಿದ್ದರು. ‘ನಾನು ಹುಟ್ಟಿದಾಗಿನಿಂದ ನೀರಿನ ಸಮಸ್ಯೆ ಇದೆ. ನನಗೀಗ 38 ವರ್ಷ. ನೀರಿಗಾಗಿ ಭಾರಿ ಜಗಳಗಳೂ ಆಗಿವೆ’ ಎಂದು ಹೇಳಿದ್ದು ಸಮಸ್ಯೆ ತೀವ್ರತೆಯನ್ನು ಬಿಡಿಸಿಟ್ಟಿತು.

‘ಸಮಸ್ಯೆಯನ್ನು ಶಾಸಕ ಬಿ. ನಾಗೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಗಮನಕ್ಕೆ ತಂದಿದ್ದರೂ ಪರಿಹಾರ ಕಂಡಿಲ್ಲ. ನಾಗೇಂದ್ರ ಶಾಸಕರಾಗಿದ್ದಾಗ ಕೈಗೆ ಸಿಗುತ್ತಿದ್ದರು. ಈಗ ಸಚಿವರಾಗುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಇನ್ನು  ಬೆಂಗಳೂರಿಗೆ ಹೋಗಬೇಕು’ ಎಂದು ಬಾಬುರೆಡ್ಡಿ ಹಾಗೂ ದಾನರೆಡ್ಡಿ ಹತಾಶೆ ವ್ಯಕ್ತಪಡಿಸಿದ್ದು ಸಮಸ್ಯೆ ಪರಿಹಾರ ಎಷ್ಟೊಂದು ಜಟಿಲ ಎಂಬುದನ್ನು ಸಂಕೇತಿಸುವಂತಿತ್ತು.

ಶಂಕರಬಂಡೆ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ. ಜುಲೈನಿಂದ ಡಿಸೆಂಬರ್‌ವರೆಗೆ ಕಾಲುವೆಗೆ ನೀರು ಬಿಟ್ಟಾಗ ನೀರಿನ ಸಮಸ್ಯೆ ಇರುವುದಿಲ್ಲ. ಉಳಿದ ಅವಧಿಯಲ್ಲಿ ಕುಡಿಯುವ ನೀರಿನ ಹಾಹಾಕಾರವಿರುತ್ತದೆ. ಅಲ್ಲಲ್ಲಿ ಕೊಳಾಯಿಗಳಿವೆ. ಅದರಲ್ಲಿ ಬರುವ ನೀರು ಸವಳು. ಶುದ್ಧ ನೀರಿನ ಕುಡಿಯುವ ಘಟಕಗಳಿವೆ. ಅವೂ ಕೆಟ್ಟಿವೆ. ಹೀಗಾಗಿ, ಪ್ರತಿ ಕೊಡ ಸಿಹಿ ನೀರಿಗೆ ₹ 5 ಪಾವತಿಸಬೇಕು

‘ಸಮಸ್ಯೆಯಿರುವ ಹಳ್ಳಿಗಳ ಪ್ರತಿ ಮನೆಯವರೂ ದಿನಕ್ಕೆ ಕುಡಿಯುವ ನೀರಿಗಾಗಿ ₹ 25ರಿಂದ  ₹ 30 ಹಣ ಖರ್ಚು ಮಾಡಬೇಕು. ಹಣ ಕೊಟ್ಟರೂ ಸಮಯಕ್ಕೆ ಸರಿಯಾಗಿ ನೀರು ಸಿಗುವುದಿಲ್ಲ. ನೀರು ತುಂಬಿಸಿದ ಬಳಿಕವೇ ನಾವು ಕೆಲಸ ಕಾರ್ಯಗಳಿಗೆ ಹೋಗಬೇಕು’ ಎಂದು ಚನ್ನಪ್ಪ ಅಲವತ್ತುಕೊಂಡರು.

‘ಹಗರಿ ನದಿ ಬಳಿಯ ತೊಲಮಾಮಿಡಿಯಿಂದ 30 ವರ್ಷಗಳ ಹಿಂದೆ 3 ಇಂಚು ಪೈಪಿನ ಮೂಲಕ ನೀರು ಪೂರೈಸುವ ಯೋಜನೆ ಮಾಡಲಾಗಿದೆ. ನೀರನ್ನು ಧನಲಕ್ಷ್ಮೀ ಕ್ಯಾಂಪ್‌ನಲ್ಲಿ ಸಂಪಿಗೆ ತುಂಬಿಸಿ ಪೂರೈಸಲಾಗುತ್ತದೆ. ನಿರ್ವಹಣೆ ಕೊರತೆಯಿಂದ ನೀರು ಬರುತ್ತಿಲ್ಲ. ಬಹುಗ್ರಾಮ ನೀರಿನ ಯೋಜನೆಯಡಿ ಬಬ್ಬಕುಂಟೆ ಬೊಮ್ಮನಹಾಳ್‌ ಮೂಲಕ 6 ಇಂಚ್ ಪೈಪ್‌ ಅಳವಡಿಸಲು ಟೆಂಡರ್‌ ಆಗಿದ್ದರೂ ಕೆಲಸ ನಡೆದಿಲ್ಲ. ಇಲ್ಲಿ ಜಲಜೀವನ್‌ ಮಿಷನ್‌ ನಿಷ್ಪ್ರಯೋಜಕ’ ಎಂಬುದು ಗ್ರಾಮಸ್ಥರ ಆರೋಪ.

 ರಸ್ತೆ ಬದಿಯ ನಳವೊಂದರಲ್ಲಿ ಕೊಡಗಳನ್ನಿಟ್ಟು ನೀರು ಹಿಡಿಯುತ್ತಿದ್ದ ಶಂಕರಬಂಡೆಯ ಟೈಲರ್‌ ವೆಂಕಟಲಕ್ಷ್ಮೀ ಮತ್ತು ಗ್ರಾಮದ ಲಕ್ಷ್ಮೀದೇವಿ, ‘ನೀರು ಬಂದು ಎರಡು ತಿಂಗಳಾಗಿತ್ತು. ಈಗ 3 ದಿನಗಳಿಂದ ಬರುತ್ತಿದೆ. ಇದು ಮನೆ ಬಳಕೆಗೆ ಆಗುತ್ತದೆ. ಕುಡಿಯಲು ಬರುವುದಿಲ್ಲ’ ಎಂದು ಹೇಳಿದ್ದು ಕಣ್ಣ ಮುಂದೆ ನೀರಿದ್ದರೂ ಕುಡಿಯಲಾಗದ ಅಸಹಾಯಕತೆಗೆ  ಕನ್ನಡಿ ಹಿಡಿಯಿತು.

ಬಳ್ಳಾರಿ ತಾಲ್ಲೂಕಿನ ಕಮರ್ಚೇಡ್‌ ಗ್ರಾಮದ ಬಳಿ ಟ್ಯಾಂಕರ್‌ನಿಂದ ಕೊಡಗಳಿಗೆ ನೀರು ತುಂಬಿಸಿಕೊಳ್ಳುತ್ತಿರುವ ಶಂಕರಬಂಡೆ ಗ್ರಾಮಸ್ಥರು 
ಬಳ್ಳಾರಿ ತಾಲ್ಲೂಕಿನ ಕಮರ್ಚೇಡ್‌ ಗ್ರಾಮದ ಬಳಿ ಟ್ಯಾಂಕರ್‌ನಿಂದ ಕೊಡಗಳಿಗೆ ನೀರು ತುಂಬಿಸಿಕೊಳ್ಳುತ್ತಿರುವ ಶಂಕರಬಂಡೆ ಗ್ರಾಮಸ್ಥರು 

₹ 5ಕ್ಕೆ ಕೊಡ ಕುಡಿಯುವ ನೀರು ನಳಗಳಲ್ಲಿ ಸವಳು ನೀರು ಪೂರೈಕೆ  ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆ  

ನೀರು ಕೊಡುವ ಭಗೀರಥ... ಆತನದು ನೀರು ಕೊಡುವ ಕಾಯಕ. ಪ್ರತಿನಿತ್ಯ ತಪ್ಪದೆ ಸಮಸ್ಯೆ ಇರುವ ಹಳ್ಳಿಗಳಿಗೆ  ನೀರು ತರುತ್ತಾನೆ. ಹಣ ಕೊಡಲಿ ಅಥವಾ ಬಿಡಲಿ ನೀರಿಗಾಗಿ ಕಾಯುವ ಕೊಡಗಳಿಗೆ ನೀರು ತುಂಬಿಸಿ ಹೋಗುತ್ತಾನೆ. ಆತನ ಹೆಸರು ರಾಮಚಂದ್ರ. ವಯಸ್ಸು ಸುಮಾರು 25 ಇರಬಹುದು. ಈತ ಟ್ಯಾಂಕರ್‌ ಚಾಲಕ. ಸರಕು ಸಾಗಿಸುವ ಮಿನಿ ವ್ಯಾನ್‌ನಲ್ಲಿ ಎರಡು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ನೀರು ತರುತ್ತಾರೆ. ದಾರಿ ಉದ್ದಕ್ಕೂ ಖಾಲಿ ಕೊಡ ಹಿಡಿದು ನಿಂತಿರುವ ಜನರಿಗೆ ನೀರು ಕೊಟ್ಟು ಮುಂದೆ ಹೋಗುತ್ತಾರೆ. ನೀರು ತುಂಬಿಸಿಕೊಂಡ ಕೆಲವರು ಹಣ ಪಾವತಿಸುವುದಿಲ್ಲ. ಅವರೂ ಕೇಳುವುದಿಲ್ಲ. ಕೊಟ್ಟವರ ಬಳಿ ತೆಗೆದುಕೊಳ್ಳುತ್ತಾರೆ. ಕೊಡದಿದ್ದರೆ ಒತ್ತಾಯ ಮಾಡುವುದಿಲ್ಲ. ಈತ ನಮಗೆ ನೀರು ಪೂರೈಸುವ ಭಗೀರಥ ಎಂದು ಹಳ್ಳಿಗರು ಪ್ರೀತಿಯಿಂದ ಹೇಳುತ್ತಾರೆ.    

ಗ್ರಾ.ಪಂ. ಸಭೆಯಲ್ಲಿ ಗದ್ದಲ... ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತದೆ. ಗದ್ದಲವೂ ನಡೆಯುತ್ತದೆ. ಆದರೂ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿಲ್ಲ. ಈ ತಿಂಗಳ 25ರಂದು ಸೇರಿದ್ದ ಗ್ರಾಮ ಪಂಚಾಯತಿ ಸಭೆಯಲ್ಲೂ ನೀರು ಸದ್ದು ಮಾಡಿತು. ಅನೇಕ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT