ಸಂಡೂರು: ಬಿಕೆಜಿ ಕಂಪನಿಯ ಹದ್ದಿನ ಪಡೆ ಐರನ್ ಓರ್ ಮೈನ್ಸ್ ಕೇಂದ್ರ ಗಣಿ ಸಚಿವಾಲಯ ನೀಡುವ ಪಂಚತಾರಾ (ಫೈವ್ ಸ್ಟಾರ್ ರೇಟಿಂಗ್) ಪ್ರಶಸ್ತಿಗೆ ಭಾಜನವಾಗಿದೆ.
ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನವದೆಹಲಿ ಆಡಿಟೋರಿಯಂನಲ್ಲಿ ಆಗಸ್ಟ್ 7ರಂದು ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಆಯೋಜಿಸಿದ್ದ ಫೈವ್ ಸ್ಟಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಸರ್ಕಾರದ ಗಣಿ ಸಚಿವಾಲಯವು ಬಿಕೆಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಎಲ್ 2516 ಹದ್ದಿನಪಡೆ ಐರನ್ ಓರ್ ಮೈನ್ಸ್‌ಗೆ ಪ್ರಶಸ್ತಿ ನೀಡಿದೆ.
2022-23ರ ಅವಧಿಯಲ್ಲಿ ಕೈಗೊಂಡ ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳ ಮಾನದಂಡದಡಿ ಈ ಪ್ರಶಸ್ತಿ ನೀಡಲಾಗಿದೆ. ಕೇಂದ್ರ ಗಣಿ ಸಚಿವರಾದ ಕಿಶನ್ ರೆಡ್ಡಿ ಮತ್ತು ಸತೀಶ್ ಚಂದ್ರ ದುಬೆ ಅವರು ಬಿಕೆಜಿ ಸಂಸ್ಥೆಯ ನಿರ್ದೇಶಕರಾದ ಬಿ. ಕೆ. ಬಸವರಾಜ ಗೌಡ, ಬಿ. ವಿನಾಯಕ ಗೌಡ ಹಾಗೂ ಹಿರಿಯ ಅಧಿಕಾರಿಗಳಾದ ಪಿ. ಶ್ರೀನಿವಾಸ ರಾವ್, ಪ್ರಮೋದ್ ರಿತ್ತಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಕೇಂದ್ರ ಗಣಿ ಸಚಿವಾಲಯವು ಕಂಪನಿಯ ಕಾರ್ಯವೈಖರಿ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಸ್ಥಳಿಯರಿಗೆ ಉದ್ಯೋಗವಕಾಶಗಳು, ಸಂಸ್ಥೆಯು ವೈಜ್ಞಾನಿಕ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಪ್ರಶಸ್ತಿ ನೀಡಿದೆ.
ಪ್ರಶಸ್ತಿಯು ಕಂಪನಿ ನಿರ್ದೇಶಕರು ಹಾಗೂ ಸಿಬ್ಬಂದಿಯ ಶ್ರಮ ಹಾಗೂ ನಿರ್ವಹಣೆಗೆ ಸಂದ ಗೌರವವಾಗಿದೆ.ಈ ಹಿನ್ನೆಲ್ಲಿಯಲ್ಲಿ ಕಂಪನಿಯ ನಿರ್ದೇಶಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು.