ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುನಾನಕ್‌ ದೇವ ಜಯಂತಿ: ಅದ್ಧೂರಿ ಮೆರವಣಿಗೆ

ಧಾರ್ಮಿಕ ಧ್ವಜ ಹಿಡಿದು ಘೋಷಣೆ ಮೊಳಗಿಸಿದ ಸಿಖ್‌ರು
Last Updated 8 ನವೆಂಬರ್ 2022, 14:11 IST
ಅಕ್ಷರ ಗಾತ್ರ

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 553ನೇ ಜಯಂತಿ ಅಂಗವಾಗಿ ನಗರದ ನಾನಕ್‌ ಶ್ರೀ ಝೀರಾ ಸಾಹೇಬ್ ಗುರುದ್ವಾರ, ಜನವಾಡದ ಮಾಯಿ ಭಾಗೋಜಿ ಗುರುದ್ವಾರ, ಕೆವಿಕೆ ಸಮೀಪದ ಭಾಯಿ ಸಾಹೇಬ್ ಸಿಂಗ್‌ಜಿ ಗುರುದ್ವಾರದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ತಡ ರಾತ್ರಿಯ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಅದ್ಧೂರಿ ಮೆರವಣಿಗೆಯೂ ಜರುಗಿತು.

ಬೆಳಿಗ್ಗೆ ಪವಿತ್ರ ಗ್ರಂಥಕ್ಕೆ ಹೊಸ ಚಾದರ ಹೊದಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು. ದೇಶದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಗ್ರಂಥ ಸಾಹೀಬ್‌ಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಗುರುದ್ವಾರದ ಅಲಂಕಾರಕ್ಕೆ ಹೂವಿನ ರಾಶಿಯನ್ನೇ ತರಲಾಗಿತ್ತು. ಮಹಿಳೆಯರು ಭಕ್ತಿ ಭಾವದಿಂದ ಬೃಹತ್‌ ಮಾಲೆಗಳನ್ನು ತಯಾರಿಸಿ ಕಟ್ಟಡದ ಅಲಂಕಾರಕ್ಕೆ ನೆರವಾದರು.

ಯಾತ್ರಿ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಗುರುದ್ವಾರ ರಂಗು ರಂಗಿನ ದೀಪಗಳಿಂದ ಝಗಮಗಿಸುತ್ತಿತ್ತು. ಭಕ್ತರ ಉದ್ಘೋಷ ಮೈನವಿರೇಳಿಸುವಂತಿತ್ತು. ಹಿಂದೂಗಳು, ಜೈನರು, ಮುಸ್ಲಿಮರು ಸಹ ಗುರುದ್ವಾರಕ್ಕೆ ಬಂದು ಗ್ರಂಥ ಸಾಹೀಬ್ ದರ್ಶನ ಪಡೆದರು.

ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೂ ಗುರುಬಾನಿ ಕೀರ್ತನೆ, ಭಜನೆ ನಡೆಯಿತು. ಭಕ್ತರು ಸರತಿಯಂತೆ ಸಂಗೀತ ಸೇವೆ ನೀಡಿದರು. ಕರಸೇವಕರು ಗ್ರಂಥ ಸಾಹೀಬ್‌ಗೆ ಚೌರಿ ಬೀಸುವ ಮೂಲಕ ಕೃತಾರ್ಥರಾದರು. ಶುದ್ಧ ತುಪ್ಪದಲ್ಲಿ ತಯಾರಿಸಿದ ಸಿಹಿಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಧ್ವಜಗಳ ಮೆರವಣಿಗೆ

ಗುರುದ್ವಾರದ ಆವರಣದಲ್ಲಿ ಬೀದರ್, ನಾಂದೇಡ್, ಹೈದರಾಬಾದ್ ಹಾಗೂ ಅಮೃತಸರ ಗುರುದ್ವಾರಗಳ ಪ್ರಮುಖರುಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು. ಧಾರ್ಮಿಕ ಧ್ವಜಗಳ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.

ಗುರುದ್ವಾರ ಆವರಣದಿಂದ ಆರಂಭವಾದ ಮೆರವಣಿಗೆಯು ನ್ಯೂಟೌನ್‌ ಪೊಲೀಸ್‌ ಠಾಣೆ ಮಾರ್ಗ, ಉದಗಿರ ರಸ್ತೆ, ಮಡಿವಾಳ ವೃತ್ತ, ರೋಟರಿ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ, ಹರಳಯ್ಯ ವೃತ್ತದ ಮಾರ್ಗವಾಗಿ ತೆರಳಿ, ಮರಳಿ ಅದೇ ಮಾರ್ಗದಲ್ಲೇ ಗುರುದ್ವಾರ ಆವರಣಕ್ಕೆ ಬಂದಿತು.

ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು, ನಿಶಾನ್‌ ಸಾಹಿಬ್‌, ಖಡ್ಗ ಹಾಗೂ ಭಲ್ಲೆ ಹಿಡಿದಿದ್ದ ಕರ ಸೇವಕರು ಗುರುನಾನಕ್‌ರ ಹೆಸರಲ್ಲಿ ಜಯಘೋಷ ಮೊಳಗಿಸಿದರು. ಕುದುರೆ ಸವಾರನ ನಗಾರಿ ವಾದನ, ಕತ್ತಿ ವರಸೆ, ಅಗ್ನಿ ಚಕ್ರ ಪ್ರದರ್ಶನ, ಬೆಂಕಿ ಉಗಳಿ ಯುವಕರು ಸಾಹಸ ಪ್ರದರ್ಶನ ನೀಡಿದರು.

ಗುರುದ್ವಾರ ಶ್ರೀ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಸದಸ್ಯ ಮನ್‌ಪ್ರೀತ್‌ಸಿಂಗ್, ಜಸ್ಪ್ರೀತ್‌ಸಿಂಗ್, ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಿಖ್‌ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕೋವಿಡ್‌ ಕಾರಣ ಎರಡು ವರ್ಷ ಅದ್ಧೂರಿ ಮೆರವಣಿಗೆ ನಡೆದಿರಲಿಲ್ಲ. ಈ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನ ದಟ್ಟಣೆ ನಿಯಂತ್ರಿಸಲು ಗುರುದ್ವಾರ ಆವರಣದಲ್ಲೇ ವಿಶೇಷ ಪೊಲೀಸ್‌ ಕೇಂದ್ರ ತೆರೆಯಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಮೆರವಣಿಗೆ ಮಾರ್ಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಉದಗಿರ ರಸ್ತೆಯಲ್ಲಿ ಸಂಜೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು.

ಭಕ್ತರಿಗೆ ಸಕಲ ವ್ಯವಸ್ಥೆ

ಸಂಚಾರ ದಟ್ಟಣೆ ನಿಯಂತ್ರಿಸಲು ಗುರುದ್ವಾರ ಸಮೀಪದ ದ್ವಿಪಥ ರಸ್ತೆ ಬಳಿಯೇ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ನ್ಯೂಟೌನ್‌ ‍ಪೊಲೀಸ್‌ ಠಾಣೆ, ಜನವಾಡ ಕಡೆಗೆ ಹೋಗುವ ಮಾರ್ಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

ಪಂಜಾಬ್, ಹರಿಯಾಣ, ದೆಹಲಿ, ನಾಂದೇಡ್‌ ಹಾಗೂ ಹೈದರಾಬಾದ್‌ನಿಂದ ಆಗಮಿಸಿದ್ದ ನೂರಾರು ಭಕ್ತರು ಗುರುದ್ವಾರ ಆವರಣದಲ್ಲೇ ವಾಸ್ತವ್ಯ ಹೂಡಿದ್ದರು. ಕೆಲವರು ಯಾತ್ರಿ ನಿವಾಸದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅನೇಕ ಭಕ್ತರು ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು.

ಭಕ್ತರಿಗೆ ವಿಶೇಷ ಉಪಾಹಾರ, ಪಾನೀಯ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಿರಂತರವಾಗಿ ಹರಿದು ಬರುತ್ತಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಗುರುದ್ವಾರ ಮಾರ್ಗದಲ್ಲಿ ಅನೇಕ ಮಾರಾಟ ಮಳಿಗೆಗಳು ತೆರೆದುಕೊಂಡಿದ್ದವು. ಖಡ್ಗ, ಜಂಬೆ, ಕಡಗ, ನಿಶಾನ್‌ ಸಾಹಿಬ್, ಧಾರ್ಮಿಕ ಚಿಹ್ನೆಗಳು, ಹೊಸ ಬಟ್ಟೆ ಇನ್ನಿತರ ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಜನ ಜಾತ್ರೆ ಇತ್ತು. ಒಟ್ಟಾರೆ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.

ಸಿಡಿಮದ್ದು ಪ್ರದರ್ಶನ

ಸುಮಾರು ಮೂರು ಕಿ.ಮೀ ಉದ್ದದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅನೇಕ ಭಕ್ತರು ರಾತ್ರಿ ಗುರುದ್ವಾರದ ಆವರಣದಲ್ಲಿ ಚಾಪೆ ಹಾಸಿ ವಿಶ್ರಾಂತಿ ಪಡೆದಿದ್ದರು. ಇಲ್ಲಿಯೇ ಸಿಡಿಮದ್ದು ಪ್ರದರ್ಶನ ಸಹ ನಡೆಯಿತು. ಒಂದೂವರೆ ತಾಸು ಹಾರಿದ ರಾಕೇಟ್‌ಗಳು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ಮಹಿಳೆಯರು, ಮಕ್ಕಳು ಆಗಸದಲ್ಲಿ ಮೂಡುತ್ತಿದ್ದ ಬೆಳಕಿನ ಚಿತ್ತಾರ ವೀಕ್ಷಿಸಿ ಸಂಭ್ರಮಿಸಿದರು.

ಪೊಲೀಸರ ಕಣ್ಣು ತಪ್ಪಿಸಿ ಯಾತ್ರಿ ನಿವಾಸದ ಮುಂಭಾಗದಲ್ಲಿ ಅನೇಕ ಯುವಕರು ಬೈಕ್‌ಗಳ ಸಾಹಸ ಪ್ರದರ್ಶನ ನೀಡಿದರು. ಬೈಕ್‌ಗಳ ಸೈಲೆನ್ಸ್‌ರ ಕಿತ್ತಿಟ್ಟು ವಾಹನಗಳನ್ನು ಓಡಿಸಿದರು. ಬೈಕ್‌ನ ಮುಂದಿನ ಚಕ್ರವನ್ನು ಎಬ್ಬಿಸಿ ಹಿಂದಿನ ಒಂದೇ ಚಕ್ರದಲ್ಲಿ ವಾಹನ ಓಡಿಸುತ್ತಿದ್ದ ಯುವಕರ ಸಾಹಸ ಪ್ರೇಕ್ಷಕರ ಮೈನವಿರೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT