ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ | ಆಂತರಿಕ ತಿಕ್ಕಾಟದಲ್ಲೇ ಅವಧಿ ಪೂರ್ಣ

ನಾಲ್ಕು ವರ್ಷ ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿಯೊಂದಿಗೆ ಜಟಾಪಟಿಯಲ್ಲೇ ಕಾಲ ಕಳೆದ ರಮೇಶ
Last Updated 21 ಫೆಬ್ರುವರಿ 2023, 1:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರೊ. ಟಿ.ಪಿ. ವಿಜಯ್‌ ಅವರನ್ನು ನೂತನ ಕುಲಪತಿಯಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಾಲಿ ಕುಲಪತಿ ಪ್ರೊ.ಸ.ಚಿ.ರಮೇಶ ಅವರ ನಾಲ್ಕು ವರ್ಷಗಳ ಅವಧಿಗೆ ತೆರೆ ಬಿದ್ದಂತಾಗಿದೆ.

ಹಂಪಿ ಕನ್ನಡ ವಿ.ವಿ. 1991ರ ಅಧಿನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಗರಿಷ್ಠ ಆರು ವರ್ಷ ಕುಲಪತಿ ಆಗಬಹುದು. ಮೊದಲ ಅವಧಿಗೆ ಮೂರು ವರ್ಷ, ನಂತರ ಮತ್ತೊಂದು ಅವಧಿಗೆ ಅಧಿಕಾರ ವಿಸ್ತರಿಸಬಹುದು. ಇಲ್ಲವಾದರೆ ಮೊದಲ ಅವಧಿ ನಂತರ ಒಂದು ವರ್ಷ ಮೀರದಂತೆ ಅವಧಿ ವಿಸ್ತರಿಸಬಹುದು. ರಮೇಶ ಅವರು 2019ರ ಫೆ. 20ರಂದು ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ಅದಾದ ಬಳಿಕ 2022ರ ಫೆ. 22ರಿಂದ ಪುನಃ ಒಂದು ವರ್ಷ ಜಾರಿಗೆ ಬರುವಂತೆ ರಾಜ್ಯಪಾಲರು ಅವರ ಅಧಿಕಾರದ ಅವಧಿಯನ್ನು 2023ರ ಫೆ. 21ರ ವರೆಗೆ ವಿಸ್ತರಿಸಿದ್ದರು.

ಅರ್ಹರಲ್ಲದಿದ್ದರೂ ಲಾಬಿ:

ಜನವರಿಯಲ್ಲಿ ಮೂರು ವರ್ಷ ಅವಧಿಗೆ ಹೊಸ ಕುಲಪತಿ ಆಯ್ಕೆಗೆ ಸರ್ಕಾರ ಅರ್ಜಿ ಕರೆದಿತ್ತು. ತಾನು ಅರ್ಜಿ ಸಲ್ಲಿಸಲು ಅರ್ಹನಲ್ಲ ಎಂಬ ವಿಚಾರ ಗೊತ್ತಿದ್ದರೂ ರಮೇಶ ಅರ್ಜಿ ಹಾಕಿದ್ದರು. ಹುದ್ದೆ ಗಿಟ್ಟಿಸಿಲು ಸಾಕಷ್ಟು ಲಾಬಿ ನಡೆಸಿದ್ದರು. ಇದರ ವಿರುದ್ಧ ಆಡಳಿತ ಮಂಡಳಿ ಸದಸ್ಯ ಶರಣಗೌಡ ಸುಂಕೇಶ್ವರಹಾಳ ಸೇರಿದಂತೆ ಹಲವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು ನೂತನ ಕುಲಪತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸೇವಾ ಹಿರಿತನ ಆಧರಿಸಿ ಪ್ರೊ. ಟಿ.ಪಿ.ವಿಜಯ್‌ ಅವರನ್ನು ಮಂಗಳವಾರದಿಂದ (ಫೆ.21) ಜಾರಿಗೆ ಬರುವಂತೆ ಮುಂದಿನ ಆದೇಶವನ್ನು ಕಾಯ್ದಿರಿಸಿ ಕುಲಪತಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ವಿಜಯ್‌ ಅವರು ವಿ.ವಿ. ಚರಿತ್ರೆ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.

ಅವಧಿಯುದ್ದಕ್ಕೂ ಆಂತರಿಕ ತಿಕ್ಕಾಟ:

2019ರ ಫೆಬ್ರುವರಿಯಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರಮೇಶ ಅವರು ಅವರ ಅವಧಿಯುದ್ದಕ್ಕೂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಆಂತರಿಕ ತಿಕ್ಕಾಟದಲ್ಲೇ ಕಾಲ ಕಳೆದರು. ಕೆಟ್ಟ ಕಾರಣಗಳಿಗಾಗಿ ವಿ.ವಿ. ಸಾಕಷ್ಟು ಸುದ್ದಿಯಲ್ಲಿತ್ತು.

ಇಷ್ಟೇ ಅಲ್ಲ, ಮುಂಬಡ್ತಿ, ತಾತ್ಕಾಲಿಕ ನೌಕರರಿಂದ ಲಂಚ, ನಿಯಮ ಮೀರಿ ಹುದ್ದೆಗಳ ನೇಮಕಾತಿ, ಫೆಲೋಶಿಪ್‌ ಬಿಡುಗಡೆಗೊಳಿಸದೇ ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದವರನ್ನು ವರ್ಗಾವಣೆ ಮಾಡಿದರು. ಇಲ್ಲಸಲ್ಲದ ನೆಪವೊಡ್ಡಿ ಕಿರುಕುಳ ಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವಾತಾವರಣವನ್ನೇ ಕುಲಗೆಡಿಸಿ, ಕನ್ನಡ ವಿಶ್ವವಿದ್ಯಾಲಯದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಸ್ವತಃ ವಿ.ವಿ. ಸಿಬ್ಬಂದಿ, ವಿದ್ಯಾರ್ಥಿಗಳೇ ಬಹಿರಂಗವಾಗಿ ಅವರ ವಿರುದ್ಧ ಆರೋಪ ಮಾಡಿ ಸರ್ಕಾರಕ್ಕೂ ಪತ್ರ ಬರೆದಿದ್ದರು.

ಇವರ ಅವಧಿಯ ಕಾಮಗಾರಿ, ಖರೀದಿಗೆ ಸಂಬಂಧಿಸಿ ತನಿಖೆ ನಡೆಸಬೇಕೆಂದು ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಇದುವರೆಗೆ ತನಿಖೆ ನಡೆಸಲಿಲ್ಲ. ರಮೇಶ ಅವಧಿಯಲ್ಲಾದ ಅಕ್ರಮ, ನಿಯಮಬಾಹಿರ ಚಟುವಟಿಕೆಗಳ ವಿರುದ್ಧ ‘ಪ್ರಜಾವಾಣಿ’ ಸಾಲು ಸಾಲು ವರದಿಗಳನ್ನು ಪ್ರಕಟಿಸಿತ್ತು. ಪತ್ರಿಕೆಯ ವರದಿ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು.

‘ಚಂದ್ರಶೇಖರ ಕಂಬಾರ, ಎಂ.ಎಂ. ಕಲಬುರ್ಗಿ ಸೇರಿದಂತೆ ಇತರರು ಬೆವರು ಹರಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ವಿಶಿಷ್ಟವಾಗಿ ಕಟ್ಟಿ, ಅದಕ್ಕೆ ಒಂದು ಘನತೆ ತಂದುಕೊಟ್ಟಿದ್ದರು. ಆದರೆ, ರಮೇಶ ಅವರು ಅವರ ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯವನ್ನು ಮುಂದಕ್ಕೆ ಕೊಂಡೊಯ್ಯುವುದರ ಬದಲು 25 ವರ್ಷ ಹಿಂದಕ್ಕೆ ತಳ್ಳಿದ್ದಾರೆ’ ಎಂದು ವಿ.ವಿ. ಹಿರಿಯ ಪ್ರಾಧ್ಯಾಪಕರು ಆರೋಪಿಸಿದ್ದಾರೆ.

‘ನಾಲ್ಕು ವರ್ಷ ವಿ.ವಿ.ಯಲ್ಲಿ ರಾಜಕೀಯ ಮಾಡುತ್ತ, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದರಲ್ಲೇ ಕಾಲ ಕಳೆದರು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿಲ್ಲ. ಒಂದೇ ಒಂದು ಹೇಳಿಕೊಳ್ಳುವಂತಹ ಅಕಾಡೆಮಿಕ್‌ ಕಾರ್ಯಕ್ರಮಗಳನ್ನು ಮಾಡಲಿಲ್ಲ. ವಿ.ವಿ.ಯನ್ನು ಹಣ ಮಾಡುವ ಸಾಧನವಾಗಿ ಬಳಸಿಕೊಂಡರು. ಇವರ ಕಾಲದಲ್ಲಾದ ಅಕ್ರಮದ ಬಗ್ಗೆ ತನಿಖೆ ನಡೆಸಿ, ರಮೇಶ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರಮೇಶ ಅವಧಿಯ ಸಾಕಷ್ಟು ಅಕ್ರಮಗಳನ್ನು ‘ಪ್ರಜಾವಾಣಿ’ ಬಯಲಿಗೆಳೆದಿತ್ತು. ಸರ್ಕಾರ ತಡವಾಗಿಯಾದರೂ ಉತ್ತಮ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ’ ಎಂದು ತಿಳಿಸಿದ್ದಾರೆ.

‘ಹಣ ಹಾಗೂ ಜಾತಿ ಲಾಬಿ ಮಾಡಿ ಕುಲಪತಿ ಹುದ್ದೆಗೆ ಇತ್ತೀಚಿನ ವರ್ಷಗಳಲ್ಲಿ ಬರುತ್ತಿದ್ದಾರೆ. ಸರ್ಕಾರ ಇದಕ್ಕೆ ಆಸ್ಪದ ಮಾಡಿಕೊಡಬಾರದು. ಕನ್ನಡ ವಿಶ್ವವಿದ್ಯಾಲಯ ನಾಡಿನ ಏಕೈಕ ಭಾಷಿಕ, ಸಂಶೋಧನಾ ವಿ.ವಿ.ಯಾಗಿದೆ. ಜ್ಞಾನ ಸೃಷ್ಟಿಸುವ ವಿ.ವಿ. ಎಂದು ಹೆಸರಾಗಿದೆ. ಭವಿಷ್ಯದಲ್ಲಾದರೂ ರಮೇಶ ಅವರಂತಹ ಅಜ್ಞಾನಿಗಳನ್ನು ವಿ.ವಿ.ಗೆ ಕುಲಪತಿಯಾಗಿ ನೇಮಿಸಬಾರದು. ಅದರ ಘನತೆ ಕಾಪಾಡಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಕೊಡಬೇಕು. ’ ಎಂದು ಒತ್ತಾಯಿಸಿದ್ದಾರೆ.

ರಮೇಶ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT