ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧ್ವಜಾರೋಹಣಕ್ಕೆ ಸೀಮಿತ ಕನ್ನಡ ಸಾಹಿತ್ಯ ಭವನ

ಸೌಕರ್ಯ, ಇಚ್ಛಾಶಕ್ತಿ ಕೊರತಗೆ ನಲುಗಿದ ಜಿಲ್ಲೆಯ ಮೊದಲ ಸಾಹಿತ್ಯ ಭವನ
Published : 15 ಆಗಸ್ಟ್ 2024, 7:09 IST
Last Updated : 15 ಆಗಸ್ಟ್ 2024, 7:09 IST
ಫಾಲೋ ಮಾಡಿ
Comments

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಸಾಹಿತ್ಯ ಭವನ ಕೇವಲ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ಮಾಡಲಷ್ಟೇ ಸೀಮಿತವಾದಂತಿದೆ. ಭವನ ಉದ್ಘಾಟನೆ ಬಳಿಕ ಐದಾರು ಸಭೆಗಳು ನಡೆದಿದ್ದವು, ಬಳಿಕ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ದಿನಗಳಂದು ಪುರಸಭೆಯಿಂದ ಸ್ವಚ್ಛಗೊಳಿಸಿ ಬೆರಳೆಣಿಕೆಯ ಪದಾಧಿಕಾರಿಗಳು ಸೇರಿ ಮಾಡುವ ಧ್ವಜಾರೋಹಣಕ್ಕಷ್ಟೇ ಉಪಯೋಗವಾದಂತಿದೆ.

ಈ ಹಿಂದೆ ಎರಡು ಅವಧಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಎಂ.ಪಿ.ಎಂ.ಮಂಜುನಾಥ ಮತ್ತು ಪದಾಧಿಕಾರಿಗಳ ಇಚ್ಛಾಶಕ್ತಿಯಿಂದಾಗಿ ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿಯಿಂದ ಭವನದ ನಿರ್ಮಾಣಕ್ಕೆ 100X100 ಚದರ ಅಡಿ ಅಳತೆಯ ನಿವೇಶನ ಪಡೆದಿದ್ದರು. ಬಳಿಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಶಾಸಕರಾಗಿದ್ದ ಅನಿಲ್ ಎಚ್.ಲಾಡ್, ಕೆ.ನೇಮರಾಜನಾಯ್ಕ, ಎಲ್.ಬಿ.ಪಿ.ಭೀಮನಾಯ್ಕ ಇವರ ಅವಧಿಯಲ್ಲಿ ಹಂತಹಂತವಾಗಿ ಒಟ್ಟು ₹7.30ಲಕ್ಷ ಅನುದಾನ ನೀಡಿದ್ದರು. ಕುಂಟುತ್ತಲೇ ಸಾಗಿದ್ದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿತು.

ಜಿಲ್ಲೆಯಲ್ಲೇ ಮೊದಲ ಕನ್ನಡ ಸಾಹಿತ್ಯ ಭವನ ಎಂದು ಹೆಗ್ಗಳಿಕೆ ಹೊಂದಿರುವ ಭವನದಲ್ಲಿ ಯಾವುದೇ ಸಾಹಿತ್ಯದ ಕಾರ್ಯಕ್ರಮಗಳು ಜರುಗದೇ ಕೊಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನದಲ್ಲಿ ಭವನ ನಿರ್ಮಾಣದ ಮೂಲ ಉದ್ಧೇಶ ಈಡೇರದಾಗಿದೆ. ಭವನಕ್ಕೆ ವಿದ್ಯುತ್ ಸೌಕರ್ಯ ಇಲ್ಲ, ಸುತ್ತುಗೋಡೆ ನಿರ್ಮಾಣ ಇಲ್ಲದಿರುವುದು ಅನೈತಿಕ ಚಟುವಟಿಕೆಗಳು ನಡೆಯುವ ತಾಣದಂತಾಗಿದೆ. ಇದರಿಂದಾಗಿ ತಾಲ್ಲೂಕಿನ ಸಾಹಿತಿಗಳು, ಸಾಹಿತ್ಯಾಸಕ್ತರು ತೀವ್ರ ಅಸಮಾಧಾನಗೊಂಡಿದ್ದಾರೆ. ಭವನದಲ್ಲಿ ತಿಂಗಳಿಗೆ ಒಂದು ಸಾಹಿತ್ಯಕ ಕಾರ್ಯಕ್ರಮವನ್ನು ಆಯೋಜಿಸುವಂತೆ ಸಂಘಟಕರನ್ನು ವಿನಂತಿಸಿಕೊಂಡಿದ್ದಾರೆ.

ಕಸಾಪ ಚಟುವಟಿಕೆಗಳು ರಾಜ್ಯದಲ್ಲಿಯೇ ನಿಷ್ಕ್ರಿಯಯಗೊಂಡಿವೆ. ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲು ಜನಪ್ರತಿನಿಧಿಗಳು ಕಸಾಪ ಭವನಕ್ಕೆ ವಿದ್ಯುತ್ ಸಂಪರ್ಕ ಅಳವಡಿಸಿ ಸಭಾಂಗಣ ನಿರ್ಮಿಸಿ ಆಸನ ವ್ಯವಸ್ಥೆ ಮಾಡಬೇಕಿದೆ.
-ಎಂ.ಪಿ.ಎಂ.ಮಂಜುನಾಥ ಕಸಾಪ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT