ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಬಳ್ಳಾರಿ ಗ್ರಾಮೀಣ ಕ್ಷೇತ್ರ ಜಿದ್ದಾಜಿದ್ದಿಗೆ ಸಾಕ್ಷಿ ಆಗುವುದೆ?

3 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ
Last Updated 26 ಮಾರ್ಚ್ 2023, 6:15 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಬಳ್ಳಾರಿ ಗ್ರಾಮೀಣದಿಂದ ಬಿ.ನಾಗೇಂದ್ರ, ಕಂಪ್ಲಿಯಿಂದ ಗಣೇಶ ಮತ್ತು ಸಂಡೂರಿನಿಂದ ತುಕಾರಾಂ ಕಣಕ್ಕಿಳಿಯಲಿದ್ದಾರೆ. ಬಳ್ಳಾರಿ ನಗರ ಹಾಗೂ ಸಿರುಗುಪ್ಪ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮಗೊಂಡಿಲ್ಲ.

ಮೂರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದು ಈ ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ, ಮೂವರೂ ಪ್ರಚಾರ ಆರಂಭಿಸಿದ್ದಾರೆ. ನಾಗೇಂದ್ರ ಮತ್ತು ತುಕಾರಾಂ ನಾಲ್ಕನೇ ಸಲ, ಗಣೇಶ್‌ ಎರಡನೇ ಬಾರಿಗೆ ಆಯ್ಕೆ ಬಯಸಿದ್ದಾರೆ.

ಕೂಡ್ಲಿಗಿ ಕ್ಷೇತ್ರವನ್ನು ಬಿಜೆಪಿ, ಪಕ್ಷೇತರರಾಗಿ ಎರಡು ಸಲ ಪ್ರತಿನಿಧಿಸಿದ್ದ ನಾಗೇಂದ್ರ 2018ರಲ್ಲಿ ಬಳ್ಳಾರಿ ಗ್ರಾಮೀಣದಿಂದ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದು, ಅದೇ ಪಕ್ಷದಿಂದ ಮರು ಆಯ್ಕೆ ಬಯಸಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಬೇರ್ಪಟ್ಟ ಬಳಿಕ ಇಲ್ಲಿ ಐದು ಕ್ಷೇತ್ರಗಳು ಉಳಿದಿದ್ದು, ನಾಲ್ಕು ಎಸ್‌.ಟಿ ಸಮುದಾಯಕ್ಕೆ
ಮೀಸಲಾಗಿವೆ. ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರವಾಗಿದೆ.

ಬಳ್ಳಾರಿ ನಗರಕ್ಕೆ ಕಾಂಗ್ರೆಸ್‌ನಿಂದ ದೊಡ್ಡ ಆಕಾಂಕ್ಷಿಗಳ ಪಟ್ಟಿಯೇ ಇದೆ. ಪ್ರತಿ ಆಕಾಂಕ್ಷಿಗಳ ಹಿಂದೆಯೂ ಒಂದೊಂದು ಗುಂಪಿದೆ. ಇದರಿಂದ ಹೆಸರು ಅಂತಿಮಗೊಳಿಸುವುದು ಕಷ್ಟವಾಗಿದೆ. ಅನಿಲ್‌ ಲಾಡ್‌, ಅಲ್ಲಂ ಪ್ರಶಾಂತ್, ಆಂಜಿನೇಯಲು, ಮಾಜಿ ಸಚಿವ ದಿವಾಕರ ಬಾಬು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಫೀಕ್‌, ನಾರಾ ಭರತ್‌ ರೆಡ್ಡಿ, ಸುನಿಲ್‌ ರಾವೂರು ಸೇರಿ 15 ಆಕಾಂಕ್ಷಿಗಳು ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿರುಗುಪ್ಪದಿಂದ ಬಿ.ಎಂ. ನಾಗರಾಜ್‌, ಮುರಳಿ ಕೃಷ್ಣ, ಲೋಕೇಶ್‌ ಸೇರಿದಂತೆ 11 ಮಂದಿ ಆಕಾಂಕ್ಷಿಗಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯ ಸೋಮಶೇಖರ ರೆಡ್ಡಿ ಆಯ್ಕೆಯಾಗಿದ್ದಾರೆ. ಸಿರುಗುಪ್ಪ ಕ್ಷೇತ್ರವನ್ನು ಇದೇ ಪಕ್ಷದ ಸೋಮಲಿಂಗಪ್ಪ ಪ್ರತಿನಿಧಿಸಿದ್ದಾರೆ. ಇವೆರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ಕೊಡಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಬಿಜೆಪಿ ಹಾಲಿ ಶಾಸಕರಿಗೇ ಟಿಕೆಟ್‌ ಕೊಡುವ ಸಾಧ್ಯತೆ ದಟ್ಟವಾಗಿದೆ ಎಂದು ಕಮಲದ ನಾಯಕರು ಹೇಳುತ್ತಿದ್ದಾರೆ.

ಕಂಪ್ಲಿಯಿಂದ ಬಿಜೆಪಿ ಟಿಕೆಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಅಳಿಯ ಮಾಜಿ ಶಾಸಕ ಸುರೇಶ್‌ ಬಾಬು, ಸಂಡೂರಿನಿಂದ ದಿ. ರಾಘವೇಂದ್ರರ ಪತ್ನಿ ಶಿಲ್ಪಾ ಮತ್ತು ಸೋದರ ಪ್ರಹ್ಲಾದ್‌, (ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಕೊಡುವಂತೆ ಆ ಕುಟುಂಬದವರು ಕೇಳಿದ್ದಾರೆ) ದಿವಾಕರ್‌, ಸಂಸದ ದೇವೇಂದ್ರಪ್ಪ ಅವರ ‍ಪುತ್ರ ಅಣ್ಣಪ್ಪ ಅವರ ಹೆಸರೂ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಬಹುದೆಂದು ನಿರೀಕ್ಷಿಸಲಾಗಿದೆ. ಸೋಮಶೇಖರ ರೆಡ್ಡಿ ವಿರುದ್ಧ ಸೋದರ ಗಾಲಿ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕೆಆರ್‌ಪಿಪಿಯಿಂದ ಸ್ಪರ್ಧೆಗೆ ಅಣಿಯಾಗಿದ್ದಾರೆ. ಸೋಮಶೇಖರ ರೆಡ್ಡಿ ಅವರೂ ಸೋದರನ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ತಯಾರಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಅಂತಿಮಗೊಂಡ ಬಳಿಕವಷ್ಟೇ ಸೋಲು– ಗೆಲುವು ಕುರಿತು ಅಂದಾಜು ಸಿಗಬಹುದು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮೀಣಕ್ಕೆ ಬರುವುದಾಗಿ ಹೇಳಿದ್ದಾರೆ. ಹಾಗಾದರೆ, ನಾಗೇಂದ್ರ ಹಾಗೂ ಶ್ರೀರಾಮುಲು ನಡುವೆ ಭಾರಿ ಹಣಾಹಣಿ ಏರ್ಪಡುವುದು ಗ್ಯಾರಂಟಿ.

‘ಶ್ರೀರಾಮುಲು, ನಾಗೇಂದ್ರ ಇಬ್ಬರೂ ಮೂಲತಃ ಒಂದೇ ಗರಡಿಯವರು. ಜನಾರ್ದನರೆಡ್ಡಿ ಅವರ ಜತೆ ಪಳಗಿದವರು. ನಾಗೇಂದ್ರ ಬಹಳ ಸಮಯದಿಂದ ಕ್ಷೇತ್ರದಲ್ಲೇ ಸುತ್ತಾಡುತ್ತಿದ್ದಾರೆ. ಜನರಿಗೆ ಸುಲಭವಾಗಿ ಸಿಗುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಎರಡರ ಪೈಕಿ ಒಂದರಲ್ಲಿ ಸ್ಪರ್ಧಿಸುವುದಾಗಿ ಈಚಿನವರೆಗೆ ಹೇಳುತ್ತಿದ್ದರು. ಈಗ ಗ್ರಾಮೀಣಕ್ಕೆ ಅಂಟಿಕೊಂಡಿದ್ದಾರೆ’ ಎಂಬ ಚರ್ಚೆಗಳು ನಡೆಯುತ್ತಿವೆ.

‘ರಾಮುಲು ಅವರಿಗೆ ಗ್ರಾಮೀಣ ಕ್ಷೇತ್ರ ಹೊಸದೇನೂ ಅಲ್ಲ. ಕ್ಷೇತ್ರದ ಭಾಗವಾಗಿರುವ ಜೋಳದರಾಶಿ ಅವರ ಸ್ವಂತ ಊರಾಗಿರುವುದರಿಂದ ಕ್ಷೇತ್ರದ ಮೇಲೆ ಹಿಡಿತವಿದೆ. ಚುನಾವಣಾ ಆಯೋಗ ಈಗಾಗಲೇ ಬಳ್ಳಾರಿ ಗ್ರಾಮೀಣ ‘ಹೈ ವೋಲ್ಟೇಜ್‌ ಕ್ಷೇತ್ರ’ ಎಂದು ಗುರುತಿಸಿದೆ. ಇಲ್ಲಿ ಹಣ ವಿಪರೀತ ಖರ್ಚಾಗಬಹುದು ಎಂದು ಭಾವಿಸಲಾಗಿದೆ. ಕಂ‍ಪ್ಲಿಯಲ್ಲೂ ಅದೇ ಪರಿಸ್ಥಿತಿ. ಹಣ ಆಯ್ಕೆಗೆ ಮಾನದಂಡವಾದರೆ ಗಣೇಶ್‌ಗೆ ಗೆಲುವು ಸುಲಭವಲ್ಲ. ಸಂಡೂರಿನಲ್ಲಿ ಬಿಜೆಪಿ ಸಮರ್ಥರನ್ನು ಕಣಕ್ಕಿಳಿಸಿದರೆ, ಟಿಕೆಟ್‌ ಸಿಕ್ಕವರ ಜತೆ ವಂಚಿತರೂ ಕೈಜೋಡಿಸಿದರೆ ಕಾಂಗ್ರೆಸ್‌ಗೆ ಕಷ್ಟವಾಗಬಹುದು ಎಂದು ರಾಜಕೀಯ ವಲಯದ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT