ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಪಿಟಿಪಿ ವಿರುದ್ಧ ಕೊಂಡಯ್ಯಗೆ ಮುನಿಸೇಕೆ?

ರಾಜಕೀಯ ಭವಿಷ್ಯ ಬದಲಾಯಿಸಿದವರೇ ತಿರುಗಿ ಬೀಳಲು ಕಾರಣವೇನು?
Last Updated 18 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ (ಪಿಟಿಪಿ) ವಿರುದ್ಧ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ಬಹಿರಂಗವಾಗಿಯೇ ಸಮರ ಸಾರಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಿಟಿಪಿ ಅವರಿಗೆ ಟಿಕೆಟ್‌ ನೀಡದಂತೆ ಹೈಕಮಾಂಡ್‌ಗೂ ದೂರು ಕೊಟ್ಟಿದ್ದಾರೆ. ‘ಹರಪನಹಳ್ಳಿಯಲ್ಲಿ ಮಾವಿನ ಮರವೆಂದು ನೆಟ್ಟೆವು. ಅದು ಬೇವಿನ ಮರ ಆಯ್ತು’, ‘ಹಡಗಲಿಗೆ ಮಲ್ಲಿಗೆ ಗಿಡ ಅಂತ ತಂದೆವು, ಅದೀಗ ಪಾರ್ಥೆನಿಯಂ ಆಗಿದೆ’ ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪಿಟಿಪಿ ವಿರುದ್ಧ ಕೊಂಡಯ್ಯ ಹರಿಹಾಯ್ದಿದ್ದರು.

ಹರಪನಹಳ್ಳಿ ತಾಲ್ಲೂಕು ಪಂಚಾಯಿತಿಯಲ್ಲಿ ಸದಸ್ಯ, ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಪಿಟಿಪಿ ಅವರನ್ನು ಗುರುತಿಸಿ, ಅವರಿಗೆ 1999, 2004ರ ವಿಧಾನಸಭೆ ಚುನಾವಣೆಯಲ್ಲಿ ಹರಪನಹಳ್ಳಿಯಿಂದ ಟಿಕೆಟ್‌ ಕೊಡಿಸಿ, ರಾಜಕೀಯವಾಗಿ ಬೆಳೆಯಲು ಕಾರಣರಾದವರೇ ಕೊಂಡಯ್ಯ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಹಡಗಲಿ ಮೀಸಲು ಕ್ಷೇತ್ರವಾಗಿ ಬದಲಾಗುತ್ತದೆ. ಆಗ ಕೂಡ ಕೊಂಡಯ್ಯನವರೇ ಪಿಟಿಪಿ ಬೆನ್ನಿಗೆ ನಿಂತು ಟಿಕೆಟ್‌ ಕೊಡಿಸುತ್ತಾರೆ. ಆ ಚುನಾವಣೆಯಲ್ಲಿ ಸೋಲುಂಡ ಪಿಟಿಪಿ ನಂತರ 2013, 2018ರ ಚುನಾವಣೆಯಲ್ಲಿ ಪುನರಾಯ್ಕೆಯಾದರು. ಇಷ್ಟೆಲ್ಲ ಮಾಡಿರುವ ಕೊಂಡಯ್ಯ ಈಗೇಕೆ ಪಿಟಿಪಿ ಮೇಲೆ ಮುನಿಸಿಕೊಂಡಿದ್ದಾರೆ? ಅದು ಕೂಡ ಚುನಾವಣೆ ಹೊಸ್ತಿಲಲ್ಲಿ ಇರುವಾಗ. ಅದಕ್ಕೇನು ಕಾರಣ?

ಕೊಂಡಯ್ಯ ವಿರುದ್ಧ ಪಿತೂರಿ:

2021ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ಘೋಷಣೆಯಾಗುತ್ತದೆ. ಕೆ.ಸಿ. ಕೊಂಡಯ್ಯನವರನ್ನು ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್‌ನಲ್ಲಿ ಗಂಭೀರ ಚಿಂತನೆ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಕೊಂಡಯ್ಯನವರಿಗೆ ಟಿಕೆಟ್‌ ಕೊಡಬಾರದು ಎಂದು ಒತ್ತಾಯಿಸಿದವರಲ್ಲಿ ಪಿಟಿಪಿ ಕೂಡ ಒಬ್ಬರು. ಚುನಾವಣೆಯಲ್ಲಿ ಪಿಟಿಪಿ ಅವರು ಕೊಂಡಯ್ಯ ಪರ ಕೆಲಸ ಮಾಡಲಿಲ್ಲ ಎಂಬ ಆರೋಪವೂ ಇದೆ.


ಹರಪನಹಳ್ಳಿ ಹಾಗೂ ಹಡಗಲಿಯಿಂದ ತಲಾ ಎರಡು ಸಲ ಗೆದ್ದಿರುವ ಪಿಟಿಪಿ, ಒಂದುವೇಳೆ ಚುನಾವಣೆಯಲ್ಲಿ ಕೊಂಡಯ್ಯನವರು ಗೆದ್ದರೆ ತನಗೆ ರಾಜಕೀಯವಾಗಿ ಬೆಳೆಯಲು ತೊಡಕಾಗಬಹುದು ಎಂದು ಭಾವಿಸಿ ತನ್ನನ್ನು ಬೆಳೆಸಿದ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕಾಂಗ್ರೆಸ್‌ನ ಅನೇಕ ಹಿರಿಯ ಮುಖಂಡರು ಕೂಡ ಈ ಮಾತನ್ನು ಒಪ್ಪುತ್ತಾರೆ. ಇದೇ ವಿಷಯ ಈಗ ಕೊಂಡಯ್ಯನವರ ಮುನಿಸಿಗೆ ಕಾರಣವಾಗಿದೆ. ಅವರು ಪಿಟಿಪಿ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದ್ದಾರೆ. ಹಡಗಲಿಯಲ್ಲಿ ಬಿಜೆಪಿಯಲ್ಲಿರುವ ಗುಂಪುಗಾರಿಕೆಯ ಲಾಭ ಪಡೆದು ಪಿಟಿಪಿ ಎರಡು ಸಲ ಗೆದ್ದಿದ್ದಾರೆ. ಆದರೆ, ಈ ಸಲ ಸ್ವಪಕ್ಷೀಯ ಪ್ರಭಾವಿ ಮುಖಂಡನೇ ಅವರ ನಿಂತಿದ್ದಾರೆ. ಇಷ್ಟೇ ಅಲ್ಲ, ಪರಮೇಶ್ವರ ನಾಯ್ಕ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತಟಸ್ಥರಾಗಿ ಉಳಿಯುವ ಸೂಚನೆ ನೀಡಿದ್ದಾರೆ. ಹೀಗಾಗಿ ಪಿಟಿಪಿ ಅವರ ದಾರಿ ಸುಲಭದ್ದಲ್ಲ.

ಕಾಂಗ್ರೆಸ್‌ ಪಕ್ಷವು ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ನೀಡುತ್ತಿದೆ. ಅದರಲ್ಲಿ ಪಿಟಿಪಿ ಹೆಸರು ಕೂಡ ಕೇಳಿ ಬರುತ್ತಿದೆ. ಒಂದುವೇಳೆ ಅವರಿಗೆ ಟಿಕೆಟ್‌ ಸಿಕ್ಕರೂ ಚುನಾವಣೆಯಲ್ಲಿ ಗೆಲುವಿನ ದಡ ಸೇರುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೊಂಡಯ್ಯ ವಿರುದ್ಧ ಪಕ್ಷ ಮೌನ:

ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕಾಗಿ ಜಿಲ್ಲಾ ಕಾಂಗ್ರೆಸ್‌ ಇತ್ತೀಚೆಗೆ ನಾಲ್ವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಆದರೆ, ಕೆ.ಸಿ. ಕೊಂಡಯ್ಯನವರು ಬಹಿರಂಗವಾಗಿಯೇ ಹಾಲಿ ಶಾಸಕ ಪಿಟಿಪಿ ವಿರುದ್ಧ ಹೇಳಿಕೆ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕುರಿತು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಅವರನ್ನು ಕೇಳಿದರೆ, ‘ಈ ವಿಷಯ ಕೆಪಿಸಿಸಿ ಗಮನಕ್ಕೆ ತರಲಾಗಿದೆ’ ಎಂದಷ್ಟೇ ಹೇಳಿದ್ದಾರೆ. ಇನ್ನು, ಕೊಂಡಯ್ಯನವರು, ‘ನನ್ನ ವಿರುದ್ಧ ಕೆಪಿಸಿಸಿಗೆ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ’ ಎಂದು ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳನ್ನು ಕೈಗೊಂಡ ಆರೋಪದ ಮೇಲೆ ಪಕ್ಷ ನಾಲ್ವರನ್ನು ಅಮಾನತುಗೊಳಿಸಿದೆ. ಆದರೆ, ಕೊಂಡಯ್ಯ ವಿಷಯದಲ್ಲಿ ಮೌನವಾಗಿದೆ. ಕೊಂಡಯ್ಯನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಕಟವರ್ತಿ ಎಂಬ ಕಾರಣಕ್ಕಾಗಿ ಕ್ರಮ ಹಿಂದೇಟು ಹಾಕುತ್ತಿದೆಯೇ ಎಂಬ ಅನುಮಾನ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT