ಕುಡತಿನಿ(ಬಳ್ಳಾರಿ): ಕೈಗಾರಿಕೆ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲಾದ ಭೂಮಿಗೆ ಪ್ರತಿಯಾಗಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುಡತಿನಿ ಭೂಸಂತ್ರಸ್ತ ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನೆ ಇಂದು 600ನೇ ದಿನ ತಲುಪಿದೆ. ಇದರ ಅಂಗವಾಗಿ ಸಂಘಟನೆಗಳು ಕುಡತಿನಿ ಬಂದ್ ಮಾಡಿವೆ.
ವಶಕ್ಕೆ ಪಡೆದ ಭೂಮಿಗೆ ನಿಗದಿ ಮಾಡಿದ ಮೋಸದ ಭೂ ಬೆಲೆಯನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ಭೂಬೆಲೆ ನಿಗದಿ ಮಾಡಬೇಕು. ಕೈಗಾರಿಕೆಗಳು ಸ್ಥಾಪನೆಯಾಗಬೇಕು, ನಿರುದ್ಯೋಗ ಭತ್ಯೆ ನೀಡಬೇಕು ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಕುಡತಿನಿ ಸೇರಿದಂತೆ ಏಳು ಗ್ರಾಮಗಳ ಭೂ ಸಂತ್ರಸ್ತರು ಹಾಗೂ ಕನ್ನಡ ಸಂಘಟನೆಗಳು ಬಂದ್ ನಲ್ಲಿ ಭಾಗವಹಿಸಿವೆ.
ಬೆಳಿಗ್ಗೆ 6 ರಿಂದಲೇ ರೈತರ ಪ್ರತಿಭಟನೆ ಆರಂಭವಾಗಿದ್ದು, ಪಟ್ಟಣದ ಒಳಗಿನ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರೈತರು ರಸ್ತೆಯಲ್ಲಿ ಟೈರ್ ಗಳನ್ನು ಸುಟ್ಟು, ರಸ್ತೆಯಲ್ಲೇ ಉಪಹಾರ ಸೇವಿಸಿದರು. ಈ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಬಸ್, ಲಾರಿಗಳು ಸೇರಿದಂತೆ ವಿವಿಧ ವಾಹನಗಳು ಪಟ್ಟಣದ ವರವಲಯದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಚರಿಸಿದವು. ವಿವಿಧ ಪಟ್ಟಣಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ಕಾರ್ಖಾನೆ ಕಾರ್ಮಿಕರು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಲಾ ಕಾಲೇಜುಗಳು, ಬ್ಯಾಂಕುಗಳು ಹಾಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಕುಡತಿನಿ, ಕುರುಗೋಡು ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ ನಲ್ಲಿ ತೊಡಗಿದ್ದಾರೆ.