ಮರಿಯಮ್ಮನಹಳ್ಳಿ: ಹಂಪಿಯಲ್ಲಿ ನಡೆದ ಜಿ–20 ಶೃಂಗಸಭೆಯಲ್ಲಿ ಸೋಮವಾರ ಗಿನ್ನೆಸ್ ದಾಖಲೆ ಸೇರಿದ ಲಂಬಾಣಿ ಕಸೂತಿ ಕಲೆ ಪ್ರದರ್ಶನದ ಹಿನ್ನೆಲೆಯಲ್ಲಿ ಮಂಗಳವಾರ ಮರಿಯಮ್ಮನಹಳ್ಳಿ ತಾಂಡಾಕ್ಕೆ ಕಲಬುರಗಿ ಸಂಸದ ಉಮೇಶ್ ಜಾಧವ್ ಹಾಗೂ ಅಧಿಕಾರಿಗು ಭೇಟಿ ನೀಡಿ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು.
ನಂತರ ಮಾತನಾಡಿದ ಅವರು, ಲಂಬಾಣಿ ಸಮಾಜದ ಕಲೆ ಸಂಸ್ಕೃತಿಯಲ್ಲಿ ಮುಖ್ಯವಾಗಿ ಕಸೂತಿ ಕಲೆಯೂ ಒಂದಾಗಿದ್ದು, ಈ ಕಸೂತಿ ಕಲೆ ಪ್ರದರ್ಶನ ಗಿನ್ನೆಸ್ ದಾಖಲೆ ಸೇರಿ ಜಾಗತಿಕ ಮನ್ನಣೆ ಸಿಕ್ಕಿದ್ದಕ್ಕೆ ಹೆಮ್ಮೆಯಾಗಿದೆ ಎಂದು ಸಂತಸ ಹಂಚಿಕೊಂಡರು.
ಅಲ್ಲದೆ ಈ ಲಂಬಾಣಿ ಸಮಾಜದಲ್ಲಿ ಭಾಷೆ, ಆಚಾರ, ವಿಚಾರ ಸೇರಿದಂತೆ ಎಲ್ಲ ಪದ್ಧತಿಗಳು ಒಂದೇಯಾಗಿದ್ದು, ಒಂದೇ ಭಾಷೆ ಮಾತನಾಡುವ ಸಮಾಜ ಎಂದರೆ ಅದು ದೇಶದಲ್ಲಿ ಸುಮಾರು 12 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಲಂಬಾಣಿ ಸಮಾಜ ಮಾತ್ರವಾಗಿದೆ ಎಂದರು.
ಈಗ ಈ ಸಮಾಜದ ಕಸೂತಿ ಕಲೆಯನ್ನು ಪ್ರಧಾನಿಗಳು ಗುರುತಿಸಿ, ಜಿ–20 ಶೃಂಗಸಭೆಯಲ್ಲಿ ಕಸೂತಿ ಕಲೆ ಪ್ರದರ್ಶಿಸಲು ದೊಡ್ಡ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ಗಿನ್ನೆಸ್ ದಾಖಲೆ ಸೇರಲು ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರಕ್ಕೆ ಅಭಿನಂದಿಸುವುದಾಗಿ ಹೇಳಿದ ಅವರು, ಇಡೀ ಬಂಜಾರ ಸಮಾಜ ಹೆಮ್ಮೆಪಡುವಂತಹ ವಿಷಯವಾಗಿದೆ ಎಂದರು
ನಂತರ ಅವರು ತಾಂಡಾದಲ್ಲಿ ನಡೆಯುತ್ತಿರುವ ಕಸೂತಿ ಕಲೆ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಎಸ್.ಕೃಷ್ಣಾನಾಯ್ಕ ಸೇರಿದಂತೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.