ಬಳ್ಳಾರಿ: ಜಿಲ್ಲೆಯಲ್ಲಿ ಆರು ತಿಂಗಳಲ್ಲಿ ಐದು ದಾಳಿ ನಡೆದ ಲೋಕಾಯುಕ್ತ, 9 ಮಂದಿ ಸರ್ಕಾರಿ ಅಧಿಕಾರಿಗಳನ್ನು ಲಂಚ ಪಡೆಯುವಾಗಲೇ ಬಂಧಿಸಿದೆ. ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಮೂಲಕ ಜಿಲ್ಲೆಯ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪವಾಗಿರುವುದನ್ನು ಬಯಲು ಮಾಡಿದೆ.
ಘಟನೆ–1: ಮಾರ್ಚ್6ರಂದು ಗುತ್ತಿಗೆದಾರರಿಂದ ₹2 ಲಕ್ಷ ಲಂಚ ಸ್ವೀಕರಿಸುವ ವೇಳೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ನಾಗರಾಜ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಕಾಮಗಾರಿಗಳ ಬಿಲ್ ಬಿಡುಗಡೆ ಮಾಡಲು ಲಂಚ ನೀಡಬೇಕಾದ ಅನಿವಾರ್ಯತೆಯನ್ನು ಈ ಪ್ರಕರಣ ಬಯಲು ಮಾಡಿತ್ತು.
ಘಟನೆ –2: ಏಪ್ರಿಲ್ 25ರಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 5 ಲಕ್ಷ ಪಡೆಯುವಾಗ ‘ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ’(ಬುಡಾ)ದ ಆಯುಕ್ತ ರಮೇಶ್ ವಟಗಲ್ ಅವರನ್ನು ಬಂಧಿಸಲಾಗಿತ್ತು. ಇವರ ಜತೆಗೆ ಇನ್ನೂ ಐದು ಮಂದಿ ಅಧಿಕಾರಿ, ಸಿಬ್ಬಂದಿಯನ್ನೂ ಬಂಧಿಸಲಾಗಿತ್ತು. ಲೇಔಟ್‌ಗಳಿಗೆ ಅನುಮೋದನೆ ನೀಡಲು ಬುಡಾದ ಅಧಿಕಾರಿಗಳು ಎಕರೆಗಿಷ್ಟು ದರ ನಿಗದಿ ಮಾಡಿದ್ದು ಈ ಪ್ರಕರಣದಿಂದ ಗೊತ್ತಾಗಿದೆ.
ಘಟನೆ 3: ಜುಲೈ 6ರಂದು ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಮತ್ತು ಮೊಹಮದ್ ಗೌಸ್ ದಾಳಿ ವೇಳೆ ತಪ್ಪಿಸಿಕೊಂಡಿದ್ದರಾದರೂ, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಪಾಲಿಕೆಯಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಆರೋಪ ಈ ಅಧಿಕಾರಿಗಳ ಮೇಲಿತ್ತು. ‘ಲಂಚದಲ್ಲಿ ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಪಾಲು ಕೊಡಬೇಕಿದೆ’ ಎಂದು ಆರೋಪಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೇಳಿದ್ದರು ಎಂಬುದನ್ನು ಲೋಕಾಯುಕ್ತದ ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಘಟನೆ–4: ಜುಲೈ 16ರಂದು ಶ್ರೀಧರಗಡ್ಡೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಪ್ರಾಣೇಶ್ ವ್ಯಕ್ತಿಯೊಬ್ಬರಿಂದ ₹2 ಲಕ್ಷ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪಂಚಾಯಿತಿ ವ್ಯಾಪ್ತಿಯ ಖಾಸಗಿ ಬಡಾವಣೆಯೊಂದರ ಸ್ವಾಧೀನ ಪತ್ರ ನೀಡಲು ಪಿಡಿಒಸತಾಯಿಸುತ್ತಿರುವುದಾಗಿ ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ –5: ಆಗಸ್ಟ್ 14ರಂದು ನಡೆದ ದಾಳಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾಗೇಶ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಚಾಲನಾ ಪರವಾನಗಿಯ ನವೀಕರಣಕ್ಕಾಗಿ ಅರ್ಜಿ ಹಾಕಿದವರಿಂದ ಲಂಚ ಪಡೆಯುತ್ತಿದ್ದ ಆರೋಪ ನಾಗೇಶ್ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.