ಮರಿಯಮ್ಮನಹಳ್ಳಿ: ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಮಂಗಳವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 11ನೇ ವಾರ್ಡಿನ ನಾಲಬಂದಿ ಸಲೀಂ(28) ಮೃತ ಯುವಕ.
ಯುವಕ ಸಲೀಂ ಅವರು ಬೆಳಿಗ್ಗೆ 8.30ರ ಸುಮಾರಿಗೆ ಚಿಕನ್ ಅಂಗಡಿಗೆ ಬಂದಾಗ ಏಕಾಏಕಿ ಅಸ್ವಸ್ಥಗೊಂಡಿದ್ದರು. ಇದರಿಂದ ಆತಂಕಗೊಂಡ ಕುಟಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು.
ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ್ದರಿಂದ ನರ್ಸ್‍ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ 108 ವಾಹನದಲ್ಲಿ ಸಾಗಿಸುವ ಮಾರ್ಗ ಮಧ್ಯೆ ಸಲೀಂ ಅವರು ಮೃತಪಟ್ಟಿದ್ದಾರೆ.
ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ಆರೋಗ್ಯ ಕೇಂದ್ರದ ಎದುರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿ, ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಕೇಂದ್ರಕ್ಕೆ ಬಂದ ತಾಲ್ಲೂಕು ಆರೋಗ್ಯಧಿಕಾರಿ ಡಾ.ಭಾಸ್ಕರ್, ಸಿಪಿಐ ವಿಕಾಸ್ ಲಮಾಣಿ, ಪಿಎಸ್‍ಐ ಮೌನೇಶ್ ರಾಠೋಡ್ ಅವರು ಪ್ರತಿಭಟನೆಕಾರರ ಸಮಸ್ಯೆ ಆಲಿಸಿದರು.
ಮನವೊಲಿಸಲು ಯತ್ನಿಸಿದರೂ ಜಗ್ಗದ ಪ್ರತಿಭಟನಾಕಾರರು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಾಸಕ ಕೆ.ನೇಮರಾಜ ನಾಯ್ಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹಾಗೂ ತಹಶೀಲ್ದಾರ್ ಶೃತಿ ಮಾಳಪ್ಪಗೌಡ ಅವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.
ಆನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಶಾಸಕ ಕೆ.ನೇಮರಾಜ ನಾಯ್ಕ, ಕೇಂದ್ರದಲ್ಲಿ ಸರಿಯಾದ ವೈದ್ಯರಿಲ್ಲದೆ ಇಂತಹ ಘಟನೆ ನಡೆದಿದ್ದು, ಕೂಡಲೇ ಹೆಚ್ಚುವರಿ ಇಬ್ಬರು ಎಂಬಿಎಸ್‍ಎಸ್ ವೈದ್ಯರನ್ನು ಹಾಗೂ ನಾಲ್ಕು ಜನ ಡಿ.ಗ್ರೂಫ್ ಸಿಬ್ಬಂದಿಯನ್ನು ನೇಮಿಸುವಂತೆ ಮತ್ತು ಇರುವ ವೈದ್ಯರಿಗೆ ಹೆಚ್ಚುವರಿ ಕಾರ್ಯಭಾರ ಕಡಿತಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಆನಂತರ ಪ್ರತಿಭಟನೆ ವಾಪಾಸು ಪಡೆದರು. ಮೃತನ ಕುಟುಂಬಸ್ಥರಿಗೆ ಶಾಸಕರು ವೈಯಕ್ತಿಕ ಪರಿಹಾರ ವಿತರಿಸಿದರು. ಯುವಕನ ಸಾವಿನ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.