ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷ ಪ್ರಧಾನ ಮೌಲ್ಯಗಳು ಜೀವಂತ: ಪ್ರೊ. ರಾಬರ್ಟ್‌ ಜೋಸ್‌

Published 12 ಆಗಸ್ಟ್ 2023, 16:09 IST
Last Updated 12 ಆಗಸ್ಟ್ 2023, 16:09 IST
ಅಕ್ಷರ ಗಾತ್ರ

ಬಳ್ಳಾರಿ: ‘ನಮ್ಮ ಸಮಾಜದಲ್ಲಿ ಪುರುಷ ಪ್ರಧಾನ ಮೌಲ್ಯಗಳು ಇನ್ನೂ ಜೀವಂತವಾಗಿದ್ದು, ಇದು ಬದಲಾದರೆ ಮಾತ್ರ ಲಿಂಗ ಸಮಾನತೆ ಸಾಧ್ಯವಾಗಲಿದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್‌ ಪ್ರಾಧ್ಯಾಪಕ ‍‍ಪ್ರೊ. ರಾಬರ್ಟ್‌ ಜೋಸ್‌ ಅಭಿಪ್ರಾಯಪಟ್ಟರು.

ಇಲ್ಲಿನ ವೀರಶೈವ ಪದವಿ ಕಾಲೇಜಿನಲ್ಲಿ ‘ಸಾಹಿತ್ಯ ಹಾಗೂ ಲಿಂಗ ಸಮಾನತೆ’ ಕುರಿತು ಶನಿವಾರ ಮಾತನಾಡಿದ ರಾಬರ್ಟ್‌ ಜೋಸ್‌, ಈಗಿನ ದಿನಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆ ಬೆಳೆದಿದ್ದಾಳೆ. ಇದರಿಂದಾಗಿ ಪುರುಷರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ’ ಎಂದು ವಿಶ್ಲೇಷಿಸಿದರು.

‘ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಮುಗಿಸಿದ ಮಹಿಳೆ ಮನೆಯಲ್ಲಿದ್ದರೆ ಯಾರದ್ದೂ ತಕರಾರಿರುವುದಿಲ್ಲ. ಅದೇ ಪುರುಷನೊಬ್ಬ ಮನೆಯಲ್ಲಿ ಕುಳಿತರೆ ಅಸಹನೆ ಶುರುವಾಗುತ್ತದೆ. ಅಂದರೆ, ಮಹಿಳೆ ಪರಾವಲಂಬಿ ಆಗಿರಬೇಕೆಂದು ನಮ್ಮ ಸಮಾಜ ಅಪೇಕ್ಷಿಸುತ್ತದೆ. ಉದ್ಯೋಗ ಮಹಿಳೆಯರ ಲಕ್ಷಣ ಎಂಬ ವಾತಾವರಣ ಸೃಷ್ಟಿಯಾದಾಗ ಲಿಂಗ ಸಮಾನತೆಯೂ ಸಾಧ್ಯವಾಗಲಿದೆ’ ಎಂದು ಅವರು ವ್ಯಾಖ್ಯಾನಿಸಿದರು.

‘ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಪುರುಷರೇ ಹೆಚ್ಚು ಸಕ್ರಿಯರಾಗಿರುತ್ತಾರೆ. ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ಬಹುತೇಕ ಅವರೇ ಭಾಗಿಯಾಗಿರುತ್ತಾರೆ. ಅವರಲ್ಲಿರುವ ಅವ್ಯಕ್ತವಾದ ಭಯವೇ ಇದಕ್ಕೆ ಕಾರಣ. ತಾನು ದುರ್ಬಲನೆಂದು ತೋರಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಅಪರಾಧ ಕೃತಗಳನ್ನು ಎಸಗುತ್ತಿದ್ದಾರೆ’ ಎಂದು ರಾಬರ್ಟ್‌ ಜೋಸ್‌ ಹೇಳಿದರು.

ಈ ಮಾತಿಗೆ ಚಿನುವಾ ಅಚಿಬೆ ಅವರ ‘ಥಿಂಗ್ಸ್‌ ಫಾಲ್‌ ಅಪಾರ್ಟ್‌’ ಕಾದಂಬರಿಯಲ್ಲಿ ಬರುವ ಎರಡು ಹಳ್ಳಿಗಳ ನಡುವಿನ ಸಂಘರ್ಷವನ್ನು ಉದಾಹರಿಸಿದರು.

ಎರಡು ಹಳ್ಳಿಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ ಇಕೆಂಪ್ಯುನ ಎಂಬ ಹುಡುಗನನ್ನು ಇನ್ನೊಂದು ಹಳ್ಳಿಯವರು ತಂದು ಒಕಾಂಕೊ ಎಂಬ ಕುಸ್ತಿಪಟುವಿನ ಮನೆಯಲ್ಲಿಟ್ಟು ಮೂರು ವರ್ಷಗಳ ನಂತರ ಕಾಡಿಗೆ ಕೊಂಡೊಯ್ದು ಕತ್ತಿಯಿಂದ ಇರಿಯುವ ಸಂದರ್ಭದಲ್ಲಿ ಆತ ಒಕಾಂಕೊನೆಡೆಗೆ ಬರುತ್ತಾನೆ. ಮಗನನ್ನು ರಕ್ಷಣೆ ಮಾಡಿದರೆ ಅಥವಾ ಕೊಲ್ಲದೆ ಬಿಟ್ಟರೆ ಆ ಕಡೆಯವರು ತನ್ನನ್ನು ದುರ್ಬಲನೆಂದು ತಿಳಿಯಬಹುದು ಎಂಬುದಾಗಿ ಭಾವಿಸಿ ತನ್ನ ಕತ್ತಿಯಿಂದಲೇ ಅವನನ್ನು ಇರಿಯುತ್ತಾನೆ’ ಎಂದು ಇಂಗ್ಲಿಷ್‌ ಪ್ರಾಧ್ಯಾಪಕರು ವಿವರಿಸಿದರು.

ವೀರಶೈವ ಪದವಿ ಕಾಲೇಜಿನ ಅಧ್ಯಕ್ಷ ದರೂರು ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಸಿ. ಮಂಜುನಾಥ್‌, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶಿವಾ ರಮೇಶ್‌, ಗಂಗಾವತಿ ವೀರೇಶ್‌ ಕರೇಗೌಡ, ಡಿ. ವಿಶ್ವನಾಥ್‌, ಎಸ್‌. ವೆಂಕಟೇಶ್‌ಗೌಡ, ಪ್ರಾಚಾರ್ಯ ಡಾ. ಸಿ. ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT