ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ಇರಿಸಲು ಉದ್ದೇಶಿಸಿರುವ ಬಳ್ಳಾರಿ ಕಾರಾಗೃಹದಲ್ಲಿ ಜಾಮರ್ ವ್ಯವಸ್ಥೆ ಇಲ್ಲ. ಇದನ್ನು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.
ಇದೇ ವರ್ಷ ಮಾರ್ಚ್ 12ರಂದು ವ್ಯಕ್ತಿಯೊಬ್ಬ ಕಾರಾಗೃಹದ ಆವರಣದಲ್ಲಿ ಮೊಬೈಲ್ ಫೋನ್ ಎಸೆದು ಹೋಗಿದ್ದ. ಇದರ ಬಗ್ಗೆ ಜೈಲು ಅಧಿಕಾರಿಗಳು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಳ್ಳಾರಿ ಕಾರಾಗೃಹದಲ್ಲಿ 413 ಪುರುಷ ಮತ್ತು 20 ಮಹಿಳೆಯರು ಸೇರಿ 433 ಕೈದಿಗಳನ್ನು ಇರಿಸಬಹುದು. ಸದ್ಯ 380 ಕೈದಿಗಳಿದ್ದಾರೆ. ವಿಚಾರಣಾಧೀನ ಬಂದಿಗಳಿಗೆ 5 ಬ್ಯಾರಕ್, ಸಜಾ ಬಂಧಿಗಳಿಗೆ 3 ಬ್ಯಾರಕ್ ಮತ್ತು ಉಳಿದವು ವಿಶೇಷ ಭದ್ರತಾ ವಿಭಾಗಗಳಾಗಿವೆ.
ಭಯೋತ್ಪಾದನೆ ಮತ್ತು ವಿಶೇಷ ಪ್ರಕಣಗಳ ಆರೋಪಿಗಳನ್ನು ವಿಶೇಷ ಭದ್ರತಾ ವಿಭಾಗಗಳಲ್ಲಿ ಇರಿಸಲಾಗುತ್ತದೆ. ಬುಲೆಟ್, ಡೂಮ್, ಪಿಟಿಝಡ್ ಮಾದರಿಯ 105 ಸಿಸಿಟಿವಿ ಕ್ಯಾಮೆರಾಗಳಿದ್ದು, ಸುಸ್ಥಿತಿಯಲ್ಲಿವೆ ಎಂದು ಗೊತ್ತಾಗಿದೆ.
‘ಬಳ್ಳಾರಿಗೆ ದರ್ಶನ್ ಕಳುಹಿಸುವ ಬಗ್ಗೆ ಉನ್ನತಾಧಿಕಾರಿಗಳಿಂದ ನಿರ್ದೇಶನ ಬಂದಿಲ್ಲ. ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲೇ ದರ್ಶನ್‌ಗೆ ಇರಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ತಿಳಿಸಿದರು.
Cut-off box - ಅಭಿಮಾನಿಗಳಿಗೆ ಕಾತರ: ಕೈದಿಗಳ ಮನೆಯವರಿಗೆ ಬೇಸರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಸ್ಥಳಾಂತರ ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಅವರನ್ನು ನೋಡಲು ನಸುಕಿನ 3 ಗಂಟೆಯಿಂದ ಬಳ್ಳಾರಿ ಕಾರಾಗೃಹದ ಸುತ್ತಮುತ್ತ ದರ್ಶನ್ ಮತ್ತು ನಟ ದಿ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಪೊಲೀಸರು ಎಲ್ಲರನ್ನೂ ಚದುರಿಸಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದರು. ಕಾರಾಗೃಹದಲ್ಲಿನ ಕೈದಿಗಳ ಭೇಟಿಗಾಗಿ ಅವರ ಸಂಬಂಧಿಕರು ಬೆಳಿಗ್ಗೆಯೇ ಬಂದಿದ್ದರು. ಆದರೆ ಭದ್ರತಾ ವ್ಯವಸ್ಥೆ ಮತ್ತು ಇನ್ನಿತರ ಕಾರಣಗಳಿಂದ ಸಂಬಂಧಿಕರಿಗೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಬೆಳಿಗ್ಗೆ 10ಕ್ಕೆ ಬಂದಿದ್ದ ಸಂಬಂಧಿಕರು ಮಧ್ಯಾಹ್ನದವರೆಗೆ ಕಾದು ಕೂತಿದ್ದರು. ಆದರೆ ಭೇಟಿಗೆ ಕೊನೆಗೂ ಅವಕಾಶ ಸಿಗದಾದಾಗ ನಿರಾಸೆಯಿಂದ ಮನೆಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.