ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ: ಕಳೆದ 10 ದಿನಗಳಿಂದ ಕ್ವಿಂಟಲ್‌ ಭತ್ತಕ್ಕೆ ₹2,300 ದರ

Published 20 ಮೇ 2023, 23:32 IST
Last Updated 20 ಮೇ 2023, 23:32 IST
ಅಕ್ಷರ ಗಾತ್ರ

ಕಂಪ್ಲಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮುನ್ನ ದರ ಕುಸಿತ ಕಂಡಿದ್ದ ಹಿಂಗಾರು ಭತ್ತ, ನಂತರ ಚೇತರಿಸಿಕೊಂಡಿದ್ದರೂ ರೈತರ ಬಳಿ ಸದ್ಯ ಭತ್ತದ ದಾಸ್ತಾನು ಖಾಲಿಯಾಗಿದೆ.

ತಾಲ್ಲೂಕಿನ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯಲ್ಲಿ ಬೇಸಿಗೆ ಹಂಗಾಮಿನಲ್ಲಿ 6,695 ಹೆಕ್ಟೇರ್‌ನಲ್ಲಿ ರೈತರು ಗಂಗಾ ಕಾವೇರಿ, ಆರ್.ಎನ್.ಆರ್ ತಳಿ ಭತ್ತ ಬೆಳೆದಿದ್ದರು. ಕಟಾವು ನಂತರ ಒಕ್ಕಲು ಪೂರ್ಣಗೊಂಡಾಗ ಎಕರೆಗೆ 50 ರಿಂದ 55 ಚೀಲ ಇಳುವರಿ ಲಭಿಸಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಏಪ್ರಿಲ್ ಕೊನೆ ವಾರದಲ್ಲಿ ಮೋಡ ಮುಸುಕಿದ ವಾತಾವರಣ, ಅಕಾಲಿಕ ಮಳೆಯಿಂದ ಭತ್ತದ ರಾಶಿ ತೊಯ್ದಿದ್ದರಿಂದ ರೈತರು ಕಂಗಾಲಾದರು. ಕೊನೆಗೆ ಅನಿವಾರ್ಯವಾಗಿ ಗಂಗಾ ಕಾವೇರಿ ಕ್ವಿಂಟಲ್‍ಗೆ ₹2,000 ಮತ್ತು ಆರ್.ಎನ್.ಆರ್ ತಳಿ ಭತ್ತ ₹2,150ಕ್ಕೆ ಮಾರಾಟ ಮಾಡಿದ್ದರು.

ಕಳೆದ ಹತ್ತು ದಿನದಲ್ಲಿ ಈ ಎರಡು ತಳಿ ಭತ್ತ ಕ್ರಮವಾಗಿ ಕ್ವಿಂಟಲ್‍ಗೆ ₹2,250 ಮತ್ತು ₹2,300ಕ್ಕೆ ಹೆಚ್ಚಳ ಕಂಡಿದೆ. ಕಂಪ್ಲಿ ಭಾಗದಿಂದ ಹೈದ್ರಾಬಾದ್ ಮತ್ತು ತಮಿಳುನಾಡಿಗೆ ಈ ಎರಡು ತಳಿ ಭತ್ತಕ್ಕೆ ಭಾರಿ ಬೇಡಿಕೆ ಇದ್ದು, ದಾಸ್ತಾನು ಮಾಡಿದ ದಲ್ಲಾಳಿಗಳಿಗೆ ಇದರ ಲಾಭ ದೊರೆಯಲಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಹಲ್ಲು ಇದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲು ಇಲ್ಲ’ ಎನ್ನುವಂತಾಗಿದೆ ನಮ್ಮ ರೈತರ ಬಾಳು ಎಂದು ಭತ್ತ ದಾಸ್ತಾನು ಮತ್ತು ದರ ಏರಿಕೆ ಕುರಿತು ರೈತ ಕೊಟ್ಟೂರು ರಮೇಶ್ ಬೇಸರ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಯೋಗ್ಯ ದರ ಲಭಿಸುವವರೆಗೆ ರೈತರು ಬೆಳೆದ ಫಸಲು ದಾಸ್ತಾನು ಮಾಡಲು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಗೋದಾಮು ನಿರ್ಮಿಸಬೇಕು
-ಬಿ.ವಿ. ಗೌಡ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT