ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ, ಸೈಬರ್‌ ಠಾಣೆಗೆ ಪ್ರಸ್ತಾವ

ಬಳ್ಳಾರಿ ವಲಯದ ಪೊಲೀಸ್‌ ಉಪಮಹಾನಿರೀಕ್ಷಕ ಲೋಕೇಶ್ ಕುಮಾರ್
Last Updated 25 ನವೆಂಬರ್ 2022, 13:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನೂತನ ವಿಜಯನಗರ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್‌ ಠಾಣೆ ಹಾಗೂ ‘ಸೈಬರ್‌ ಎಕನಾಮಿಕ್ಸ್‌ ಅಂಡ್‌ ನಾರ್ಕೊಟಿಕ್ಸ್‌’ ಠಾಣೆ ಸ್ಥಾಪನೆಗೆ ಈಗಾಗಲೇ ಪ್ರಸ್ತಾವ ಕಳಿಸಲಾಗಿದೆ’ ಎಂದು ಬಳ್ಳಾರಿ ವಲಯದ ಪೊಲೀಸ್‌ ಉಪಮಹಾನಿರೀಕ್ಷಕ ಲೋಕೇಶ್ ಕುಮಾರ್ ಬಿ.ಎಸ್. ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಠಾಣೆ, ಸೈಬರ್‌ ಠಾಣೆಗಳು ಬಹಳ ಅತ್ಯಗತ್ಯ. ಆರ್ಥಿಕ ಇಲಾಖೆಯ ಬಳಿ ಪ್ರಸ್ತಾವ ಇದೆ. ಸದ್ಯದಲ್ಲೇ ಅದಕ್ಕೆ ಮಂಜೂರಾತಿ ಸಿಗಲಿದೆ. ಮಹಿಳಾ ಠಾಣೆ ಆಗುವವರೆಗೆ ಈಗಿರುವ ಆಯಾ ಠಾಣೆಗಳಿಗೆ ಅದರ ಜವಾಬ್ದಾರಿ ವಹಿಸಲಾಗಿದೆ. ಅವರೇ ಪ್ರಕರಣ ದಾಖಲಿಸಿ, ತನಿಖೆ ಮಾಡುತ್ತಾರೆ. ಸೈಬರ್‌ ಠಾಣೆಗೆ ಬೇಕಿರುವ ಎಲ್ಲ ಉಪಕರಣಗಳು ಈಗಾಗಲೇ ಬಂದಿವೆ ಎಂದು ವಿವರಿಸಿದರು.

ಹಂಪಿ ಪ್ರವಾಸಿ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಖಾಲಿ ಇದೆ. 20 ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ ಬಡ್ತಿ ಕೊಡುವ ಪ್ರಕ್ರಿಯೆ ನನ್ನ ಹಂತದಲ್ಲಿಯೇ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಸಬ್‌ ಇನ್‌ಸ್ಪೆಕ್ಟರ್‌ ನೇಮಿಸಲಾಗುವುದು. ಹಂಪಿಗೆ ಹೊರರಾಜ್ಯ, ಹೊರದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅಲ್ಲಿ ಏನೇ ಘಟಿಸಿದರೂ ಅಂತರರಾಷ್ಟ್ರೀಯ ವಿಷಯವಾಗುತ್ತದೆ. ಅಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದು ತಿಳಿಸಿದರು.

11.32 ಎಕರೆ ಮಂಜೂರು:

ನಗರದ ಟಿಎಸ್‌ಪಿ ಬಳಿ ಡಿ.ಎ.ಆರ್‌. ಕ್ಯಾಂಪಸ್‌ಗೆ 11.32 ಎಕರೆ ಜಾಗ ಜಿಲ್ಲಾಡಳಿತ ಮಂಜೂರು ಮಾಡಿದೆ. ಈ ಹಿಂದೆ ಜಂಬುನಾಥಹಳ್ಳಿ ಸಮೀಪ ಜಾಗ ಕೊಡಲು ನಿರ್ಧರಿಸಲಾಗಿತ್ತು. ಈಗ ನಗರದ ಮಧ್ಯದಲ್ಲಿಯೇ ಜಾಗ ಸಿಕ್ಕಿರುವುದರಿಂದ ಬಹಳ ಅನುಕೂಲವಾಗಲಿದೆ. ಡಿ.ಎ.ಆರ್‌. ಕಚೇರಿ, ಪರೇಡ್‌ ಗ್ರೌಂಡ್‌, ಹೆಲಿಪ್ಯಾಡ್‌, ಕ್ವಾರ್ಟರ್ಸ್‌, ಶ್ವಾನ ದಳದ ಕಚೇರಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಹೊಸಪೇಟೆ ನಗರದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿವೆಯೋ ಅವುಗಳನ್ನು ದುರಸ್ತಿಗೊಳಿಸಲಾಗುವುದು. ಅಗತ್ಯವಿರುವ ಕಡೆ ಹೊಸದಾಗಿ ಅಳವಡಿಸಲಾಗುವುದು. ದೊಡ್ಡ ಬಂದೋಬಸ್ತ್‌ ಇದ್ದಾಗ ಬಾಡಿಗೆ ಮೇಲೆ ಸಿಸಿಟಿವಿ ಕ್ಯಾಮೆರಾ ಪಡೆದು ಅಳವಡಿಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳಿದ್ದರೆ ಅಪರಾಧ ಕೃತ್ಯಗಳ ಪರಿಶೀಲನೆಗೆ ನೆರವಾಗುತ್ತದೆ ಎಂದರು.

ಡಿ.ಎ.ಆರ್‌. ನಲ್ಲಿ ಪೊಲೀಸರ ಕೊರತೆ ಇದೆ. ಅದೇ ರೀತಿ 80 ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇವೆ. ಅದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಪರೀಕ್ಷೆ ಮುಗಿದು ಹೊಸಬರ ನೇಮಕ ಆಗುವವರೆಗೆ ಕಾಯಬೇಕಿದೆ. ಈಗಿರುವ ಸಂಚಾರ ಪೊಲೀಸ್‌ ಠಾಣೆ ಊರ ಹೊರಗೆ ಇದೆ. ಹಿಂದೆ ಗಣಿಗಾರಿಕೆ ಹೆಚ್ಚಿದ್ದಾಗ ಅಲ್ಲಿ ಲಾರಿಗಳ ಓಡಾಟದ ಮೇಲೆ ನಿಗಾ ಇಡಲು ಸ್ಥಾಪಿಸಲಾಗಿತ್ತು. ಆದರೆ, ಈಗ ಅದೆಲ್ಲ ನಿಂತಿದೆ. ಸಣ್ಣ ಅಪಘಾತವಾದರೂ ಜನ ಅಲ್ಲಿಗೆ ಹೋಗಬೇಕಾಗುತ್ತದೆ. ಹಾಗಾಗಿ ನಗರದಲ್ಲೇ ಸಂಚಾರ ಪೊಲೀಸ್‌ ಠಾಣೆ ಆರಂಭಿಸಲು ಚಿಂತನೆ ನಡೆದಿದೆ. ಹೆಚ್ಚುವರಿ ಎಸ್ಪಿ ಹುದ್ದೆ ಸೃಜಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಪ್ರಸ್ತಾವ ಇದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT