ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಂದು ಪ್ರವಾಸೋದ್ಯಮ ಸಚಿವರ ಕಚೇರಿ ಎದುರು ಪ್ರತಿಭಟನೆ

Last Updated 22 ನವೆಂಬರ್ 2022, 13:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ಸುತ್ತಮುತ್ತ ಖಾಸಗಿ ಕಂಪನಿಗಳು ಬ್ಯಾಟರಿಚಾಲಿತ ವಾಹನ ಓಡಿಸಲು ಮುಂದಾಗಿರುವುದನ್ನು ವಿರೋಧಿಸಿ ಗುರುವಾರ (ನ.24) ಪ್ರತಿಭಟನಾ ರ್‍ಯಾಲಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ಸ್‌ ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದರು.

ಅಂದು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಪ್ರವಾಸೋದ್ಯಮ ಸಚಿವರ ಕಚೇರಿ ವರೆಗೆ ರ್‍ಯಾಲಿ ನಡೆಸಿ, ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ವಿಶ್ವಪ್ರಸಿದ್ಧ ಹಂಪಿಗೆ ದಿನದಿಂದ ದಿನಕ್ಕೆ ದೇಶ–ವಿದೇಶಗಳಿಂದ ಪ್ರವಾಸಿಗರು ಬಂದು ಹೋಗುವುದು ಹೆಚ್ಚಾಗಿದೆ. ಇದರ ಮೇಲೆ ಕಣ್ಣಿಟ್ಟಿರುವ ಖಾಸಗಿ ಕಂಪನಿಗಳು ಬ್ಯಾಟರಿಚಾಲಿತ ವಾಹನ ಓಡಿಸಲು ಮುಂದಾಗಿವೆ. ಇದರಿಂದ ಸ್ಥಳೀಯ ಆಟೊ ಚಾಲಕರು, ವಾಹನ ಮಾಲೀಕರಿಗೆ ದೊಡ್ಡ ಏಟು ಬೀಳಲಿದೆ. ಚಾಲಕ ವೃತ್ತಿಯನ್ನೇ ನಂಬಿಕೊಂಡು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಸ್ಥಳೀಯರಿಗೆ ಪ್ರೋತ್ಸಾಹ, ನೆರವು ನೀಡಬೇಕು ಹೊರತು ಕಂಪನಿಗಳಿಗೆ ನೀಡಬಾರದು ಎಂದು ಹಕ್ಕೊತ್ತಾಯ ಮಾಡಿದರು.

ದುಬಾರಿ ದಂಡ, ಶುಲ್ಕ ವಿಧಿಸುವ ಐಎಂವಿ ತಿದ್ದುಪಡಿ ಕಾಯ್ದೆ 2019 ಹಿಂಪಡೆಯಬೇಕೆಂದು ಆಗ್ರಹಿಸಿ ನ. 27ರಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಸಮೀಪದ ಸೆಕ್ರಟೇರಿಯಟ್‌ ಹಾಲ್‌ನಲ್ಲಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ವಾಹನಗಳ ಇನ್‌ಶೂರೆನ್ಸ್‌ ಮೇಲೆ ವಿಧಿಸುತ್ತಿರುವ ಸಿಜಿಎಸ್ಟಿ/ಜಿಎಸ್ಟಿ ತೆಗೆದು ಹಾಕಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ₹500 ಕೋಟಿ ಅನುದಾನ ನೀಡಬೇಕು. ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಆಟೊರಿಕ್ಷಾ ಕೊಡಬೇಕು. ಆ್ಯಪ್‌ ಆಧಾರಿತ ಸೇವೆ ಕೊಡುವ ಖಾಸಗಿ ಕಂಪನಿಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಮಿನಿ ಲಾರಿ ಸಂಘದ ಗೌರವ ಅಧ್ಯಕ್ಷ ಮೈನುದ್ದೀನ್‌, ಲಘು ಗೂಡ್ಸ್‌ ವಾಹನಗಳ ಸಂಘದ ಕಾರ್ಯದರ್ಶಿ ರಾಮಚಂದ್ರ,ಆಟೊ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಯಮುನಪ್ಪ, ಖಜಾಂಚಿ ಎಸ್‌. ಅನಂತಶಯನ, ಸಂಘಟನಾ ಕಾರ್ಯದರ್ಶಿ ಎಸ್‌. ವಿಜಯಕುಮಾರ್‌, ಸಿಐಟಿಯು ತಾಲ್ಲೂಕು ಸಂಚಾಲಕಿ ಕೆ.ಎಂ. ಸ್ವಪ್ನಾ, ಸಿಐಟಿಯು ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT