ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಬರ

Published 31 ಜುಲೈ 2023, 5:17 IST
Last Updated 31 ಜುಲೈ 2023, 5:17 IST
ಅಕ್ಷರ ಗಾತ್ರ

ಬಳ್ಳಾರಿ: ಯಾವುದೇ ನಗರ ಸುಂದರವಾಗಿ ಇರಬೇಕಾದರೆ ಅಲ್ಲಿ ಸಾರ್ವಜನಿಕ ಶೌಚಾಲಯಗಳ ಸೌಲಭ್ಯ ವ್ಯವಸ್ಥಿತವಾಗಿರಬೇಕು. ಈ ಮಾತಿಗೆ ಬಳ್ಳಾರಿ ನಗರವೂ ಹೊರತಲ್ಲ. ಜನ ಶೌಚಾಲಯಗಳು ಇಲ್ಲದಿದ್ದರೆ ಕಂಡಕಂಡಲ್ಲಿ ಮಲ, ಮೂತ್ರ ವಿಸರ್ಜಿಸುತ್ತಾರೆ. ಪುರುಷರೇನೋ ಎಲ್ಲಿ ಬೇಕಾದರೂ ಮೂತ್ರ ವಿಸರ್ಜಿಸಬಹುದು. ಮಹಿಳೆಯರಿಗೆ ಕಷ್ಟ. ಅವಸರವಿದ್ದರೂ ಎಲ್ಲೆಂದರಲ್ಲಿ ಹೋಗಲು ಸಾಧ್ಯವಿಲ್ಲ.

ಈ ಮಾತು ಬಳ್ಳಾರಿಗೆ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ಎಲ್ಲ ನಗರಗಳಿಗೂ ಅನ್ವಯಿಸಬಹುದು. ಬಳ್ಳಾರಿ ನಗರದ  ಜನಸಂಖ್ಯೆ (ದಿನನಿತ್ಯದ ವ್ಯವಹಾರಕ್ಕೆ ಬರುವವರೂ ಸೇರಿ) ಆರು ಲಕ್ಷ ಇರಬಹುದು. ನೆರೆಯ ಆಂಧ್ರ ಪ್ರದೇಶದ ಅನಂತಪುರ, ಗುಂತಕಲ್‌, ಆಲೂರು, ಆಧೋನಿ ಮುಂತಾದ ಕಡೆಗಳಿಂದಲೂ ಜನ ಇಲ್ಲಿಗೆ ಬಂದು ಹೋಗುತ್ತಾರೆ. ಈ ಜನಸಂಖ್ಯೆಗೆ ಅಗತ್ಯವಿರುವಷ್ಟು ಶೌಚಾಲಯಗಳಿಲ್ಲ ಎಂಬುದು ನಿರ್ವಿವಾದ.

‘ಸ್ವಚ್ಛ ಭಾರತ್‌ ಮಿಷನ್‌‘ ಮಾರ್ಗಸೂಚಿಯಂತೆ ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ  500 ರಿಂದ 750 ಮೀಟರ್‌ ವ್ಯಾಪ್ತಿಯಲ್ಲಿ ಶೌಚಾಲಯಗಳು ಇರಬೇಕು. ಬಡವರು ವಾಸ ಮಾಡುವ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ಇರದಿದ್ದ ಪಕ್ಷದಲ್ಲಿ ಸಮುದಾಯ ಶೌಚಾಲಯಗಳಿರಬೇಕು. ಅದರಂತೆ ಬಳ್ಳಾರಿಯಲ್ಲಿ 71 ಸಾರ್ವಜನಿಕ ಶೌಚಾಲಯಗಳಿವೆ. ಸುಮಾರು 35 ಸಮುದಾಯ ಶೌಚಾಲಯಗಳಿವೆ ಎಂಬುದು ಅಧಿಕೃತ ಅಂಕಿಅಂಶ.

71 ಸಾರ್ವಜನಿಕ ಶೌಚಾಲಯಗಳಲ್ಲಿ 25 ಮಾತ್ರ ಸರಿಯಾಗಿ ನಿರ್ವಹಣೆಯಾಗುತ್ತಿವೆ. 28 ರಿಪೇರಿ ಹಂತದಲ್ಲಿವೆ. 3 ಬೀಳುವ ಸ್ಥಿತಿಯಲ್ಲಿವೆ. ಮಿಕ್ಕ 15 ಶೌಚಾಲಯಗಳ ನಿರ್ವಹಣೆಗೆ ಶೀಘ್ರ ಟೆಂಡರ್‌ ಕರೆಯಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಎಸ್‌.ಎನ್‌.ರುದ್ರೇಶ್‌ ತಿಳಿಸಿದರು.

ಸಾರ್ವಜನಿಕ ಶೌಚಾಲಯದ ಗುತ್ತಿಗೆ ಪಡೆದವರಿಗೆ ಸಮುದಾಯ ಶೌಚಾಲಯಗಳ ನಿರ್ವಹಣೆ ಹೊಣೆ ಕೊಡಲಾಗಿದೆ. ಆದರೂ ಇವುಗಳನ್ನು ಕಂಡರೆ ವಾಕರಿಕೆ ಬರುತ್ತದೆ. ಗಬ್ಬು ವಾಸನೆ, ಒಳಗೆ ಹೋಗಲಾಗದ ಸ್ಥಿತಿ. ಎಲ್ಲೋ ಅಲ್ಲೊಂದು, ಇಲ್ಲೊಂದು ಉತ್ತಮವಾಗಿ ನಿರ್ವಹಣೆ ಆಗುತ್ತಿರಬಹುದು. ಪೇ ಅಂಡ್‌ ಯೂಸ್‌‘ ಆಧಾರದಲ್ಲಿ ನಿರ್ವಹಿಸುವ ಸಾರ್ವಜನಿಕ ಶೌಚಾಲಯಗಳಿಂದ ಸಂಗ್ರಹವಾಗುವ ಹಣದಲ್ಲೇ ಸಮುದಾಯ ಶೌಚಾಲಯಗಳನ್ನು ಗುತ್ತಿಗೆದಾರರು ನಿರ್ವಹಣೆ ಮಾಡಬೇಕು ಎಂದು ಪಾಲಿಕೆ ಮೂಲಗಳು ಹೇಳಿವೆ.

ಹೊಟೇಲ್‌, ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಶೌಚಾಲಯಗಳು ಇರಬೇಕು ಎಂಬುದು ಕಡ್ಡಾಯ. ಈ ಶೌಚಾಲಯಗಳನ್ನು ಸಾರ್ವಜನಿಕರು ಬಳಸಬಹುದು. ಇದಕ್ಕೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ‍ಪಾಲಿಕೆಗೆ ದೂರು ಕೊಡಬಹುದು. ತಕ್ಷಣ  ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳುವವರಿಗೆ ₹ 10 ಸಾವಿರದವರೆಗೆ ಸಹಾಯಧನ ಸಿಗುತಿತ್ತು. 2013ರಲ್ಲಿ ಜಾರಿಗೆ ಬಂದ ಯೋಜನೆ 2018ರ ಆಸುಪಾಸಿನಲ್ಲಿ ಸ್ಥಗಿತಗೊಂಡಿತು. ಮುಂದೆ ಏನಾದರೂ ಸರ್ಕಾರ ಪುನಃ ಸಹಾಯಧನ ಜಾರಿಗೆ ತರುವುದೇ ಎಂದು ಗೊತ್ತಿಲ್ಲ ಎಂಬುದು ಪಾಲಿಕೆ ಮೂಲಗಳ ವಿವರಣೆ.

ಎಷ್ಟೋ ಕೊಳೆಗೇರಿ ಪ್ರದೇಶಗಳಲ್ಲಿ ಇನ್ನೂ ಜನ ಬಯಲನ್ನೇ ಆಶ್ರಯಿಸಿದ್ದಾರೆ. ಶೌಚಾಲಯಗಳ ಬಳಕೆ ಬಗ್ಗೆ ಜನರಿಗೆ ತಿಳಿವಳಿಕೆ ಕಡಿಮೆ. ಜಾಗೃತಿ ಮೂಡಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಸಬ್ಸಿಡಿ ಹಣದಲ್ಲಿ ಶೌಚಾಲಯ ಕಟ್ಟಿಸಿಕೊಂಡಿದ್ದರೂ ಅದನ್ನು ಸೌದೆ, ಬೆರಣಿ ಅಥವಾ ಹಳೆ ಸಾಮಾನು, ಸರಂಜಾಮು ತುಂಬಲು ಬಳಸುತ್ತಿದ್ದಾರೆ. ಮತ್ತೆ ಬೆಳಗಿನ ಕರ್ಮಗಳಿಗೆ ಬಯಲೇ ಆಶ್ರಯ.

ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು ಸಾರ್ವಜನಿಕ ಆಸ್ತಿ. ಅವು ಪ್ರತಿಯೊಬ್ಬರಿಗೂ ಸೇರಿದ್ದು. ಇಂಥ ಪ್ರಜ್ಞೆ ಜನರಿಗೆ ಬಂದರೆ ಪರಿಸ್ಥಿತಿ ಸುಧಾರಿಸುತ್ತದೆ. ಅದೂ ಬರುವವರೆಗೆ ಕಾಯಬೇಕು. ಸದ್ಯದ ವಾತಾವರಣ ಹೇಗಿದೆ ಎಂದರೆ, ಶೌಚಾಲಯಗಳ ನಲ್ಲಿ ಕಿತ್ತುಕೊಂಡು ಹೋಗುವುದು; ಬಾಗಿಲು ಮುರಿದುಕೊಂಡು ಹೋಗುವುದು; ಚಿಲಕಗಳನ್ನು ಕಸಿಯುವುದು ಸಾಮಾನ್ಯವಾಗಿದೆ.

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT