ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ| ಹನುಮ ಮಾಲೆ ಮಾದರಿಯಲ್ಲಿ ‘ಪುನೀತ ಮಾಲೆ’

ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ಕಾರ್ಯಕ್ರಮ, ನಟನ ಹೆಸರು ಬಳಕೆಗೆ ಆಕ್ಷೇಪ
Last Updated 23 ಫೆಬ್ರುವರಿ 2023, 8:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಪ್ಪು ಹುಡುಗರು ಡಾ. ಪುನೀತ್‌ ರಾಜಕುಮಾರ್‌ ಅಭಿಮಾನಿಗಳ ಬಳಗ’ವು ಪುನೀತ್‌ ಅವರ ಜನ್ಮದಿನದ ಅಂಗವಾಗಿ ಹನುಮ ಮಾಲೆ ಮಾದರಿಯಲ್ಲಿ ‘ಪುನೀತ ಮಾಲೆ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮೇಲ್ನೋಟಕ್ಕೆ ಪುನೀತ್‌ ಅಭಿಮಾನಿಗಳ ಬಳಗದವರು ಇದನ್ನು ಆಯೋಜಿಸಿದಂತೆ ಕಂಡು ಬರುತ್ತಿದೆ. ಆದರೆ, ಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಈ ಕಾರ್ಯಕ್ರಮ ರೂಪಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಇದರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇದನ್ನು ಪುಷ್ಟೀಕರಿಸುವಂತೆ ‘ಪುನೀತ ಮಾಲೆ’ ಕಾರ್ಯಕ್ರಮದ ಕರಪತ್ರಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರದೊಂದಿಗೆ ಸಿದ್ದಾರ್ಥ ಸಿಂಗ್‌ ಅವರ ಭಾವಚಿತ್ರ ದೊಡ್ಡದಾಗಿ ಪ್ರಕಟಿಸಲಾಗಿದೆ. ಚಿತ್ರದ ಅಡಿಯಲ್ಲಿ ಅಪ್ಪು ಅಭಿಮಾನಿ, ಸಮಾಜ ಸೇವಕ ಎಂದು ಬರೆಯಲಾಗಿದೆ. ಮಾಲಾಧಾರಿಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿರುತ್ತಾರೆ ಎಂದು ಬರೆಯಲಾಗಿದೆ.

ಆದರೆ, ಬಳಗದ ಅಧ್ಯಕ್ಷ ಕಿಚಡಿ ವಿಶ್ವ, ಉಪಾಧ್ಯಕ್ಷ ಜೋಗಿ ತಾಯಪ್ಪ ಅವರ ಭಾವಚಿತ್ರಗಳು ಕರಪತ್ರದಲ್ಲಿ ಇಲ್ಲ. ಅಂದಹಾಗೆ, ಜೋಗಿ ತಾಯಪ್ಪ ಅವರು ಸಿದ್ದಾರ್ಥ ಸಿಂಗ್‌ ಪರ ನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳುತ್ತಾರೆ. ಸಿದ್ದಾರ್ಥ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅದರ ವಿಡಿಯೊ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಜೋಗಿ ತಾಯಪ್ಪ ಪೋಸ್ಟ್‌ ಮಾಡುತ್ತಾರೆ.

ನಟನ ಹೆಸರು ಬಳಕೆಗೆ ಆಕ್ಷೇಪ:

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಟ ಪುನೀತ್‌ ರಾಜಕುಮಾರ್‌ ಅವರ ಹೆಸರು ಬಳಸಿಕೊಂಡು ಅವರ ಹೆಸರಿನಲ್ಲಿ ‘ಪುನೀತ ಮಾಲೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ಪುನೀತ್‌ ರಾಜಕುಮಾರ್‌ ಅವರು ಯಾವುದೇ ಸದ್ದು ಗದ್ದಲವಿಲ್ಲದೇ ಸಮಾಜ ಸೇವೆ ಮಾಡಿದ್ದರು. ಅವರು ಗತಿಸಿ ಹೋಗಿದ್ದನ್ನು ಜನ ಇಂದಿಗೂ ನೆನಪಿಸಿಕೊಂಡು ಭಾವುಕರಾಗುತ್ತಾರೆ. ಈಗಲೂ ಅವರನ್ನು ಮರೆಯಲು ಸಾಧ್ಯವಾಗಿಲ್ಲ. ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅವರ ಹೆಸರಿನಲ್ಲಿ ‘ಪುನೀತ ಮಾಲೆ’ ಮಾಡುತ್ತಿರುವುದು ಸರಿಯಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪುನೀತ್‌ ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಈ ಬಗ್ಗೆ ಜೋಗಿ ತಾಯಪ್ಪ ಅವರನ್ನು ಸಂಪರ್ಕಿಸಿದಾಗ, ‘ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಪುನೀತ ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. ಸಿದ್ದಾರ್ಥ ಸಿಂಗ್‌ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಕಾರ್ಯಕ್ರಮ ಹೇಗಿರುತ್ತೆ?:

ಮಾರ್ಚ್‌ 1ರಿಂದ 18ರ ವರೆಗೆ ಮಾಲೆಗಳನ್ನು ಧರಿಸಬೇಕು. ಮಾ. 17ರ ವರೆಗೆ ವ್ರತ ಆಚರಿಸುವವರು ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಅಂಗಿ ಧರಿಸಿ ಅಪ್ಪು ಚಿತ್ರವಿಟ್ಟು ಪೂಜಿಸಬೇಕು. ಮಾ. 17ರಂದು ಹೊಸಪೇಟೆಯ ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮಾ. 18ರಂದು ಬೆಂಗಳೂರಿನಲ್ಲಿರುವ ಪುನೀತ್‌ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅಕ್ಕಿ, ಬೇಳೆ, ಎಣ್ಣೆ ಸಮರ್ಪಿಸಲಾಗುತ್ತದೆ. ಬಳಿಕ ಅದನ್ನು ಬಡವರಿಗೆ ಹಂಚಲಾಗುತ್ತದೆ. ‘ಮಾ. 17 ಪುನೀತ್‌ ಜನ್ಮದಿನವನ್ನು ‘ಸ್ಫೂರ್ತಿ ದಿನ’ವಾಗಿ ಆಚರಿಸಲಾಗುತ್ತದೆ. ಅದರ ಅಂಗವಾಗಿ ‘ಪುನೀತ ಮಾಲೆ’ ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪು ಅಭಿಮಾನಿ ಬಳಗದ ಉಪಾಧ್ಯಕ್ಷ ಜೋಗಿ ತಾಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT