ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಸೆ.14ಕ್ಕೆ ರಾಷ್ಟ್ರೀಯ ಲೋಕ ಅದಾಲತ್

ಬಾಕಿ ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಾಧೀಶೆ ಕೆ.ಜಿ ಶಾಂತಿ ಸಲಹೆ
Published 24 ಆಗಸ್ಟ್ 2024, 14:10 IST
Last Updated 24 ಆಗಸ್ಟ್ 2024, 14:10 IST
ಅಕ್ಷರ ಗಾತ್ರ

ಬಳ್ಳಾರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೆಪ್ಟೆಂಬರ್‌ 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯುತ್ತಿದ್ದು, ಬಾಕಿ ಇರುವ ವ್ಯಾಜ್ಯಗಳನ್ನು ಸಾರ್ವಜನಿಕರು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಜಿ ಶಾಂತಿ ತಿಳಿಸಿದ್ದಾರೆ. 

ನೂತನ ನ್ಯಾಯಾಲಯ ಸಂಕೀರ್ಣದ ವಿ.ಸಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರು ವ್ಯಾಜ್ಯಪೂರ್ವ, ಅಪರಾಧಿಕ, ಚೆಕ್ ಬೌನ್ಸ್ , ಬ್ಯಾಂಕ್, ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣ, ವೈವಾಹಿಕ, ಕೌಟುಂಬಿಕ, ಸಿವಿಲ್ ಸೇರಿದಂತೆ ಇನ್ನಿತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಮೆಗಾ-ಲೋಕ್ ಅದಾಲತ್‌ನಲ್ಲಿ ‍ಪ‍ರಿಹರಿಸಿಕೊಳ್ಳಬಹುದು’ ಎಂದು ಹೇಳಿದರು.

‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ 31 ನ್ಯಾಯಾಲಯಗಳಲ್ಲಿ 59,434 ಪ್ರಕರಣಗಳು ಬಾಕಿಯಿದ್ದು, 4,109 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಬಹುದು ಎಂದು ಗುರುತಿಸಲಾಗಿದೆ. ಅವುಗಳಲ್ಲಿ 905 ಪ್ರಕರಣಗಳು ರಾಜಿ ಸಂಧಾನದ ಮೂಲಕ ಪರಿಹರಿಸಬಹುದು. ಇನ್ನುಳಿದ ಪ್ರಕರಣಗಳನ್ನೂ ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದರು.

ಮೆಗಾ-ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಮತ್ತು ನ್ಯಾಯವಾಧಿ ಸಮಾಧಾನಕಾರರ ಸಮ್ಮುಖದಲ್ಲಿ ಪ್ರತಿದಿನ ಕಾಳಜಿ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಂಧಾನಕರರು ಕಕ್ಷಿದಾರರ ಮನವೊಲಿಸಿ ಪ್ರಕರಣಗಳನ್ನು ರಾಜಿಗೆ ತೆಗೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಪೂರ್ವಭಾವಿ ಬೈಠಕ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಿಂದಿನ ಅದಾಲತ್‌ನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. 1,13,540 ವ್ಯಾಜ್ಯಪೂರ್ವ ಪ್ರಕರಣ ಮತ್ತು 11,902 ಬಾಕಿ ಪ್ರಕರಣ ಸೇರಿದಂತೆ ಒಟ್ಟು 1,25,442 ಪ್ರಕರಣಗಳಲ್ಲಿ ₹74,00,54,519 ಪರಿಹಾರ ಒದಗಿಸಲಾಗಿತ್ತು. ಮುಂಬರುವ ಅದಾಲತ್‌ನಲ್ಲಿ ಹೆಚ್ಚಿನ ಗುರಿ ಸಾಧಿಸುವ ಗುರಿ ಹೊಂದಲಾಗಿದೆ ಎಂದೂ ಅವರು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT