ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ: ರುಚಿಮೊಗ್ಗು ಕೆರಳಿಸುತ್ತ, ಹೃದಯ ಅರಳಿಸುತ್ತ...

Last Updated 22 ಅಕ್ಟೋಬರ್ 2022, 12:34 IST
ಅಕ್ಷರ ಗಾತ್ರ

ಬಳ್ಳಾರಿ, ಡಾ.ಜೋಳದರಾಶಿ ಡೊಡ್ಡನಗೌಡರ ವೇದಿಕೆ: ಆಹಹಾ... ಖಾರ ಖಾರ... ಹಂಗಂತ ಬಿಡುವಂತಿಲ್ಲ. ತುತ್ತು ಮುಗಿಯುವ ಮೊದಲು ಮತ್ತೊಂದು ತುತ್ತಿಗೆ ಕೈ ಏಳುತ್ತಿತ್ತು. ಬಿಡುವಂತಿಲ್ಲ.. ರುಚಿ, ಉಣ್ಣುವಂತಲೂ ಇಲ್ಲ... ಇನ್ನೊಂದೆಡೆ ಗಂಟೆಗಟ್ಟಲೆ ಕೂರುವುದು ಗೊತ್ತಿಲ್ಲದವರೂ ಕುರ್ಚಿಗೆ ಅಂಟಿಕೊಂಡಿದ್ದಾರೆ. ಎದ್ದು ಹೋಗಬೇಕಿದೆ.. ಮುಂದೇನು? ಮುಂದಿನ ಕವಿಯೇನು ಹೇಳಬಹುದು ಎಂಬ ಕುತೂಹಲ ಏಳಲು ಬಿಡದು.

ಹೊಟ್ಟೆಗೂ ಹೃದಯಕ್ಕೂ, ಬುದ್ಧಿಗೂ, ಭಾವಕ್ಕೂ ಒಟ್ಟೊಟ್ಟಿಗೆ ರಸದೌತಣ ನೀಡಿದ್ದು, ಸಂಗಂ ವಿಶ್ವಕವಿ ಸಮ್ಮೇಳನದ ಎರಡನೆಯ ದಿನದ ವಿಶೇಷವಾಗಿತ್ತು.

ಹಿರಿಯ ಕವಿ ಎಚ್‌.ಎಸ್‌. ಶಿವ‍ಪ್ರಸಾದ್‌, ಓ.ಎಲ್‌.ನಾಗಭೂಷಣ ಸ್ವಾಮಿ ಅವರು ಕಂಡಲ್ಲಿ ಅಭಿಮಾನಿಗಳು ಸೆಲ್ಫಿಗೆ ಮುತ್ತಿಗೆ ಹಾಕುತ್ತಿದ್ದರು. ವಿದೇಶಿ ಕವಿಗಳ ಜೊತೆಗೆ ಫೋಟೊ ಕ್ಲಿಕ್ಕಿಸುವ, ತಮ್ಮ ಪುಸ್ತಕಗಳನ್ನು ಅವರ ಕೈಗೆ ನೀಡಿ, ಫೋಟೊ ತೆಗೆಯುವವರಿಗೂ ಕೊರತೆ ಇರಲಿಲ್ಲ.

ಕನ್ನಡದ ಕವಿಗಳೆಲ್ಲ ಒಂದಾಗಿ ಹರಟುತ್ತ, ನಗುತ್ತ, ಒಟ್ಟೊಟ್ಟಿಗೆ ಕಾಫಿ ಸೇವಿಸುವ, ಊಟಕ್ಕೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಆಯೋಜಕರು ಪ್ರತಿಯೊಬ್ಬರಿಗೂ ಕ್ಷೇಮಸಮಾಚಾರ ವಿಚಾರಿಸುತ್ತಿದ್ದುದು ಕಾಣುತ್ತಿತ್ತು.
ಗೋಷ್ಠಿಯೊಂದರ ಕವಿತೆಯ ಸಾಲುಗಳನ್ನು ಚರ್ಚಿಸುತ್ತ, ಸಾಹಿತ್ಯದ ವಾತಾವಾರಣ ಸೃಷ್ಟಿಸಿದ ಈ ವಿಶ್ವಕವಿ ಸಮ್ಮೇಳನವು ಇಂಥವು ಹಲವು ಸಮ್ಮೇಳನಗಳಾಗಬೇಕು ಎಂಬ ತೀರ್ಮಾನ ಹೊರಡಿಸುತ್ತಿದ್ದರು.

ಆತಿಥ್ಯವಹಿಸಿದ್ದ ಬಳ್ಳಾರಿಯ ಬಂಧುಗಳು ಅತಿಥಿಗಳಿಗೆ ಬಳ್ಳಾರಿಯ ರುಚಿಯನ್ನು ಉಣಬಡಿಸುವುದರಲ್ಲಿ ಹಿಂದುಳಿಯಲಿಲ್ಲ. ಎರಡನೆಯ ದಿನ ಮಂಡಕ್ಕಿ ಒಗ್ಗರಣೆ, ಮಿರ್ಚಿ ಬಜ್ಜಿ ಮತ್ತು ತುಪ್ಪದ ದೋಸೆಯ ಜೊತೆಗೆ ಕಲ್ಯಾಣ ಕರ್ನಾಟಕದ ವಿಶೇಷ ಖಾದ್ಯ ಡಬಲ್‌ ಕಾ ಮೀಠಾ ಸಹ ನೀಡಿದರು.

ಊಟದಲ್ಲಿ, ಆಂಧ್ರದ ಗಡಿ ಹಂಚಿಕೊಂಡಿರುವುದಕ್ಕೆ ನ್ಯಾಯ ಸಲ್ಲಿಸುವಂತೆ ಪೊಪ್ಪು ನೀಡಿದ್ದರು. ಖಾರಕ್ಕೆ ರೆಕ್ಕೆ ಬಂದಂತೆ, ಬಾಯಿಗಿಟ್ಟ ತಕ್ಷಣ, ಬಾಯ್ತುಂಬ ಖಾರ ಆವರಿಸಿ, ಕಣ್ಣೀರು ಉಕ್ಕುತ್ತಿತ್ತು ಊಹೂಂ... ಶತಮಾನಗಳ ದಾಹವಿದು ಎಂಬಂತೆ ಮೈ ಎಲ್ಲ ಬೆವರುತ್ತಿತ್ತು.
ಆದರೆ ಈ ಖಾರವನ್ನೆಲ್ಲ ಹೀರುವಂಥ ತವಾ ಮೀಠಾಯಿ ನಾಲಗೆ ಕೆರಳುವುದನ್ನೂ, ಕರುಳು ನರಳುವುದನ್ನೂ ತಡೆಯುವಂತಿತ್ತು. ಅಜ್ಜಿಯ ನೆರೆತ ಕೂದಲಿನೆಳೆಯಷ್ಟೇ ನಾಜೂಕಿನ ಶಾವಿಗೆಗೆ, ಪುಟ್ಟ ಪುಟಾಣಿ ಜಾಮೂನು, ಜೊತೆಗೆ ಗರಿಗರಿಯಾಗಿರುವ ಆಗರಾದ ಸಿಹಿ ಪೇಠಾದ ತುಣುಕುಗಳು. ನಾಲಗೆಯಿಂದ ಕಂಠದವರೆಗೂ ಸವಿಯಾಗಿಸಿ, ಸಿಹಿ ನೆನಪನ್ನು ಉಳಿಸಿತು.

ಬಾಡಕದ ಮೆಣಸಿನಕಾಯಿ, ಹಪ್ಪಳ, ಮತ್ತು ಚಟ್ನಿಪುಡಿಗಳ ಜೊತೆಗೆ ಇಂದು ಹಸಿರು ಟೊಮೆಟೊ ಚಟ್ನಿ, ಹಸಿವು ಕೆರಳಿಸುವಂತಿತ್ತು. ಹೊಟ್ಟೆತುಂಬ ಭೂರಿ ಭೋಜನ ಉಂಡವರಿಗೆ ಕಣ್ಣೆಳೆಯವುದು ಸಾಮಾನ್ಯ. ಇದನ್ನು ಅರಿತವರಂತೆ ಆಯೋಜಕರು ಲಂಬಾಣಿ ಗೀತ ನೃತ್ಯವನ್ನು ಆಯೋಜಿಸಿದ್ದರು.

ನರನಾಡಿಗಳಲ್ಲಿ ಉತ್ಸಾಹ ಮತ್ತು ಜೋಷ್‌ ತುಂಬುವ ಆ ಹಾಡು ಮತ್ತು ಹೆಜ್ಜೆಗಳು ಮತ್ತೆ ಕವಿಗೋಷ್ಠಿಯ ಅಂಗಳಕ್ಕೆ ಕರೆತಂದವು. ನಿದಿರಾ ದೇವಿ ಮತ್ತೆ ಬರುವೆನೆಂಬ ಭಾಷೆ ಕೊಟ್ಟು, ಸಭಾಂಗಣದಿಂದ ವಿದಾಯ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT