ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆ ನೀರೆತ್ತುವ ಮೋಟಾರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ 6 ಎಂವಿಎ ಸಾಮರ್ಥ್ಯದ ಪರಿವರ್ತಕ ಬುಧವಾರ ಬೆಂಕಿ ಹೊತ್ತಿಕೊಂಡು ಉಪಕರಣಗಳು ಭಸ್ಮವಾಗಿರುವ ಘಟನೆ ಸಂಭವಿಸಿದೆ.
ನೀರೆತ್ತುವ ಮೋಟಾರ್‌ಗಳು ಬಂದ್ ಆಗಿರುವುದರಿಂದ ಹೂವಿನಹಡಗಲಿ, ಕೆ.ಅಯ್ಯನಹಳ್ಳಿ, ರಾಜವಾಳ, ಹೊಳಗುಂದಿ, ಮಾಗಳ ಮುಖ್ಯ ಕಾಲುವೆಗಳಲ್ಲಿ ನೀರು ಸ್ಥಗಿತಗೊಂಡಿದೆ.
‘ಪರಿವರ್ತಕದಲ್ಲಿ ಸಣ್ಣಪುಟ್ಟ ದೋಷವಿದ್ದರೆ ಮೂರು ದಿನದಲ್ಲಿ ರಿಪೇರಿಯಾಗಬಹುದು. ದೊಡ್ಡ ಪ್ರಮಾಣದ ದೋಷವಿದ್ದರೆ ದುರಸ್ತಿಗೆ ಕೆಲವು ದಿನ ಬೇಕಾಗಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಕಾಲುವೆ ನೀರು ನಂಬಿ ರೈತರು ಜೋಳ, ಮೆಕ್ಕೆಜೋಳ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಸದ್ಯ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಕಾಲುವೆ ನೀರು ಸ್ಥಗಿತಗೊಂಡು, ಮಳೆಯೂ ಕೈ ಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪರಿವರ್ತಕವನ್ನು ತ್ವರಿತವಾಗಿ ದುರಸ್ತಿ ಮಾಡಿಸಿ ಕಾಲುವೆಗಳಿಗೆ ನೀರು ಹರಿಸಬೇಕು’ ಎಂದು ರೈತ ಸಂಘದ ಕಾರ್ಯದರ್ಶಿ ಹೊಳಗುಂದಿ ಶಿವರಾಜ್ ಒತ್ತಾಯಿಸಿದ್ದಾರೆ.
‘ವಿದ್ಯುತ್ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ತಾಂತ್ರಿಕ ತಜ್ಞರು ಬಂದು ಪರಿಶೀಲಿಸಲಿದ್ದು, ಆದಷ್ಟು ಬೇಗ ಸರಿಪಡಿಸಿ ಕಾಲುವೆಗೆ ನೀರು ಹರಿಸುತ್ತೇವೆ’ ಎಂದು ಸಿಂಗಟಾಲೂರು ಯೋಜನೆ ವಿಭಾಗ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಶಿವಮೂರ್ತಿ ತಿಳಿಸಿದರು.